ಮೃತದೇಹದಲ್ಲಿ 16 ಗಂಟೆಗಳ ಕಾಲ ಇರುತ್ತೆ ಕೊರೊನಾ ವೈರಸ್

Public TV
2 Min Read

– ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಯ ಶವ ಪರೀಕ್ಷೆ
– ಖ್ಯಾತ ವಿಧಿ ವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಮಾಹಿತಿ

ಬೆಂಗಳೂರು: ಕೋವಿಡ್-19 ಕಾರಣದಿಂದ ಸತ್ತವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ವೈರಸ್ ಯಾರಿಗೆ ಯಾವ ಸಮಯದಲ್ಲಿ ಹೇಗೆ ಹರಡುತ್ತದೆ ಎಂದು ನಿರ್ಧಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಹೀಗಿರುವಾಗ ಕೊರೊನಾದಿಂದ ಸತ್ತಮೇಲೂ ಮೃತದೇಹದಲ್ಲಿ ಕೊರೊನಾ ಜೀವಂತವಾಗಿರುತ್ತದೆ ಎಂದು ಸಂಶೋಧನೆಯ ಮೂಲಕ ತಿಳಿದುಬಂದಿದೆ.

ಹೌದು. 16 ಗಂಟೆಗಳ ಕಾಲ ಕೊರೊನಾ ವೈರಸ್ ಸತ್ತ ವ್ಯಕ್ತಿಯ ದೇಹದಲ್ಲಿ ಸಕ್ರಿಯವಾಗಿರುತ್ತದೆ. ಶ್ವಾಸಕೋಶಕ್ಕೆ ಮಾತ್ರವಲ್ಲದೆ ದೇಹದ ಇತರ ಅಂಗಗಳ ಮೇಲೆ ಮಾರಕ ಪರಿಣಾಮವನ್ನು ಬೀರುತ್ತದೆ ಎಂಬ ಮಾಹಿತಿಯನ್ನು ಖ್ಯಾತ ವಿಧಿ ವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ತಿಳಿಸಿದ್ದಾರೆ.

ರಾಜ್ಯದಲ್ಲೇ ಮೊದಲ ಬಾರಿಗೆ ಕೊರೊನಾ ಸೋಂಕಿನಿಂದ ಮೃತಪಟ್ಟ ಶವದ ಪರೀಕ್ಷೆ ನಡೆಸಿರುವ ಡಾ. ದಿನೇಶ್ ರಾವ್ ಅವರು ವೈರಸ್‍ನಿಂದ ವ್ಯಕ್ತಿ ಮೃತ ಪಟ್ಟ ಮೇಲೆ 16 ಗಂಟೆಗಳ ಕಾಲ ಜೀವಂತವಾಗಿರುತ್ತದೆ. ಕೊರೊನಾ ನಿರ್ಜೀವ ವಸ್ತುಗಳ ಮೇಲೆ ಗರಿಷ್ಠವೆಂದರೆ 8 ರಿಂದ 9 ಗಂಟೆಗಳ ಕಾಲ ಮಾತ್ರ ಜೀವಂತವಾಗಿರುತ್ತದೆ ಎಂಬ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದಾರೆ.

ಸಿಟಿ ಸ್ಕ್ಯಾನ್ ಮಾಡಿ:
ಸೋಂಕು ಶ್ವಾಸಕೋಶ, ಹೃದಯ, ರಕ್ತನಾಳ, ಲಿವರ್, ಮೂತ್ರಜನಕಾಂಗ ಮತ್ತು ಮೆದುಳಿಗೆ ಹಬ್ಬಿತ್ತು. ಲಿವರ್ ಮತ್ತು ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದು ಕಂಡುಬಂದಿತ್ತು ಹಾಗಾಗಿ ಸಿ.ಟಿ. ಸ್ಕ್ಯಾನ್ ಮಾಡುವುದು ಅಗತ್ಯ ಎಂದು ದಿನೇಶ್ ರಾವ್ ಸಲಹೆ ನೀಡುತ್ತಾರೆ.

ಜೀವಂತ ಹೇಗೆ?
ಮೂಗು, ಬಾಯಿ, ಗಂಟಲ ದ್ರವ, ಚರ್ಮ, ಕೂದಲು ಶ್ವಾಸಕೋಶ ಸಂಪರ್ಕಿಸುವ ನಾಳ ಮತ್ತು ಚರ್ಮಗಳಲ್ಲಿ ಕೊರೊನಾ ವೈರಾಣು ಇದೆಯಾ ಎಂದು ಪರೀಕ್ಷೆ ನಡೆಸಲಾಯಿತು. ಆದರೆ ಚರ್ಮದ ಮೇಲೆ ಯಾವುದೇ ವೈರಸ್ ಕಾಣಿಸಿಕೊಳ್ಳಲಿಲ್ಲ. ಗಂಟಲು, ಶ್ವಾಸಕೋಶ, ಮೂಗು, ಬಾಯಲ್ಲಿ ಕೊರೊನಾ ವೈರಸ್ ಜೀವಂತವಾಗಿರುತ್ತದೆ ಎಂದು ಕೊರೊನಾ ದಿಂದ ವ್ಯಕ್ತಿಯ 16 ಗಂಟೆಯನಂತರ ಸಿಕ್ಕ ಮೃತದೇಹದ ಸಂಶೋಧನೆಯಿಂದ ಕಂಡು ಬಂದಿದೆ ಎಂದು ಡಾ. ದಿನೇಶ್ ರಾವ್ ಹೇಳಿದ್ದಾರೆ.

ಶ್ವಾಸಕೋಶ ಹೇಗಿರುತ್ತೆ?
ವೈರಸ್ ದಾಳಿಯ ಪ್ರಮುಖ ಗುರಿಯೇ ಶ್ವಾಸಕೋಶವಾಗಿರುತ್ತದೆ. ಬೇರೆ ಇತರ ಕಾರಣಗಳಿಂದ ಸತ್ತಿರುವ ವ್ಯಕ್ತಿಯ ಶ್ವಾಸಕೋಶ ಸ್ಪಂಜಿನಂತಿರುತ್ತದೆ. ಆದರೆ ಕೊರೊನಾದಿಂದ ಸತ್ತ ವ್ಯಕ್ತಿಯ ಶ್ವಾಸಕೋಶ ತುಂಬಾ ಗಟ್ಟಿಯಾಗಿರುತ್ತದೆ. ಶ್ವಾಸಕೋಶದಲ್ಲಿ ಗಾಳಿಯ ಅಂಶವೇ ಇರುವುದಿಲ್ಲ. ರಕ್ತ ಹೆಪ್ಪುಗಟ್ಟಿರುತ್ತದೆ

ವೆಂಟಿಲೇಟರ್ ಚಿಕಿತ್ಸೆ ಪ್ರಯೋಜನಕಾರಿಯೇ?
ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ರೋಗಿಗೆ ವೆಂಟಿಲೇಟರ್ ಚಿಕಿತ್ಸೆ ನೀಡಿದರೆ ಪ್ರಯೋಜನವಿಲ್ಲ. ರಕ್ತವನ್ನು ತಳಮಳಗೊಳಿಸುವ ಥ್ರೊಬೊಲೂಟಿಕ್ ಡ್ರಗ್ಸ್ ನೀಡಿ ಸೋಂಕು ಹಬ್ಬದಂತೆ ತಡೆಯಬೇಕು. ಜೊತೆಗೆ ಆಮ್ಲಜನಕವನ್ನು ನೀಡಬೇಕು ಆಗ ಮಾತ್ರ ವ್ಯಕ್ತಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ದಿನೇಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಅಗ್ನಿಸ್ಪರ್ಶ ಉತ್ತಮ ಯಾಕೆ ಗೊತ್ತಾ?
ಶವವನ್ನು ಹೂಳಿದಾಗ ದೇಹದಲ್ಲಿನ ವೈರಾಣು ನೀರಿಗೆ ಸೇರಬಹುದು. ಪ್ರಾಣಿ, ಪಕ್ಷಿಗಳಿಗೂ ವೈರಸ್ ಹಬ್ಬುವ ಸಾಧ್ಯತೆ ಇರುತ್ತದೆ. ಆದ್ದರಿಂದ ದಹನ ಮಾಡುವುದೇ ಸೂಕ್ತ ಎಂದು ಡಾ. ದಿನೇಶ್‍ರಾವ್ ಅವರು ಅಭಿಪ್ರಾಯಪಟ್ಟಿದ್ದಾರೆ. ಗಂಟಲು ದ್ರವ ಮತ್ತು ಮೂಗಿನಲ್ಲಿ 16 ಗಂಟೆಗಳ ಬಳಿಕವೂ ವೈರಸ್ ಜೀವಂತವಾಗಿರುತ್ತದೆ. ಚರ್ಮ ಕೂದಲಿನಲ್ಲಿ ವೈರಸ್ ಪತ್ತೆಯಾಗದೆ ಇರುವಾಗ ಶವವನ್ನು ಕುಟುಂಬಸ್ಥರಿಗೆ ನೀಡಬಹುದು. ಆದರೆ ಗಂಟಲು ಮತ್ತು ಮೂಗಿನಿಂದ ವೈರಸ್ ಹರಡದಂತೆ ವಿಶೇಷ ಕಾಳಜಿವಹಿಸಬೇಕಾಗುತ್ತದೆ ಎಂದು ಡಾ. ದಿನೇಶ್ ರಾವ್ ಹೇಳುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *