ಮೂರು ವರ್ಷ ಕಳೆದರೂ ಮುಗಿಯದ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ- ಜನರಲ್ಲಿ ಮುಂದುವರಿದ ಆತಂಕ

Public TV
2 Min Read

– ಮಳೆಗಾಲ ಆರಂಭವಾದರೆ ಹೇಗೆ ಎಂಬುದು ಸ್ಥಳೀಯರ ಅಳಲು

ಮಡಿಕೇರಿ: ಪ್ರತಿ ಮಳೆಗಾಲದಲ್ಲಿ ಮುಳುಗಾಡೆಯಾಗುವ ಭಾಗಮಂಡಲಕ್ಕೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿಯನ್ನು 2018ರಲ್ಲೇ ಆರಂಭಿಸಿದ್ದು, 2021 ಆರಂಭವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇತ್ತ ಮಳೆಗಾಲ ಬಂದರೆ ಹೇಗೆ ಎಂಬ ಆತಂಕ ಈ ಬಾರಿಯೂ ಜನರಲ್ಲಿ ಮುಂದುವರಿದಿದೆ.

ಕೊಡಗು ಜಿಲ್ಲೆಯಲ್ಲಿ ಕನಿಷ್ಠ ಐದು ತಿಂಗಳ ಕಾಲ ನಿರಂತರವಾಗಿ ಮಳೆ ಸುರಿಯುತ್ತದೆ. ಅದರಲ್ಲೂ ಭಾಗಮಂಡಲ, ತಲಕಾವೇರಿ ಭಾಗದಲ್ಲಿ ದಿನಕ್ಕೆ ನೂರು ಮಿ.ಮೀ. ಗಿಂತಲೂ ಅಧಿಕ ಮಳೆ ಸುರಿಯುತ್ತದೆ. ಹೀಗೆ ಮಳೆ ಸುರಿಯಿತೆಂದರೆ ಮೊದಲು ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿ ಪ್ರವಾಹ ಸೃಷ್ಟಿಯಾಗಿಬಿಡುತ್ತದೆ. ತ್ರಿವೇಣಿ ಸಂಗಮ ಮುಳುಗಡೆಯಾಗುತ್ತಿದ್ದಂತೆ, ತಲಕಾವೇರಿ, ಕೋರಂಗಾಲ, ಅಯ್ಯಂಗೇರಿ, ನಾಪೋಕ್ಲು ಮತ್ತು ಚೇರಂಗಾಲ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತದೆ.

ಕಳೆದ ಮೂರು ವರ್ಷಗಳಿಂದ ಜುಲೈ, ಆಗಸ್ಟ್ ತಿಂಗಳು ಬಂತೆಂದರೆ ಪ್ರವಾಹ ಮತ್ತು ಭೂಕುಸಿತ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಇದೆಲ್ಲವನ್ನು ಮನಗಂಡು ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಿಸಿ ಈ ಪ್ರವಾಹದ ನಡುವೆ ಜನರು ಪರದಾಡುವುದನ್ನು ತಪ್ಪಿಸಲು ನಿರ್ಧರಿಸಲಾಗಿತ್ತು. 34 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ 2018 ರಲ್ಲಿ ಚಾಲನೆ ನೀಡಲಾಗಿತ್ತು. ಆದರೆ 2021 ಆಗಮಿಸಿದರೂ ಸೇತುವೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.

ಒಂದು ವರ್ಷದೊಳಗೆ ಮುಗಿಯಬೇಕಾಗಿದ್ದ ಮೇಲ್ಸೇತುವೆ ಕಾಮಗಾರಿ ಮೂರು ವರ್ಷಗಳು ಕಳೆದರೂ ಇಂದಿಗೂ ಕುಂಟುತ್ತಲೇ ಸಾಗಿದೆ. 2019 ರಲ್ಲಿ ಕೋರಂಗಾಲದಲ್ಲಿ ಭೂಕುಸಿತವಾಗಿ ಒಂದೇ ಸ್ಥಳದಲ್ಲಿ 5 ಜನರು ಭೂಸಮಾಧಿಯಾಗಿದ್ದರು. ಈ ವೇಳೆ ಸ್ಥಳವನ್ನು ತಲುಪಬೇಕಾಗಿದ್ದ ರಕ್ಷಣಾ ಪಡೆಗಳು, ಸ್ಥಳೀಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇನ್ನು 2020 ರ ಆಗಸ್ಟ್ ತಿಂಗಳಲ್ಲೂ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದುಬಿದ್ದ ಪರಿಣಾಮ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಮತ್ತು ಕುಟುಂಬದ ಐವರು ಭೂಸಮಾಧಿಯಾಗಿದ್ದರು. ಆಗಲೂ ಭಾಗಮಂಡಲದಲ್ಲಿದ್ದ ಪ್ರವಾಹದ ನೀರನ್ನು ದಾಟಿ ಮುಂದೆ ಹೋಗಲು ಎರಡು ದಿನಗಳೇ ಕಾಯಬೇಕಾಗಿತ್ತು.

ಇಷ್ಟೆಲ್ಲಾ ಆದರೂ ಮೇಲ್ಸೇತುವೆಯ ಕಾಮಗಾರಿ ಮಾತ್ರ ಪೂರ್ಣಗೊಳ್ಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಕೇಳಿದರೆ, ಇಷ್ಟೊತ್ತಿಗೆ ಕಾಮಗಾರಿ ಮುಗಿಯಬೇಕಾಗಿತ್ತು. ಆದರೆ ಲಾಕ್‍ಡೌನ್ ಆಗಿದ್ದರಿಂದ ಕಾಮಗಾರಿ ಸ್ಥಗಿತವಾಗಿತ್ತು. ಈಗ ಮತ್ತೆ ಆರಂಭವಾಗಿದ್ದು ಮುಂದಿನ ಮಳೆಗಾಲದೊಳಗೆ ಮುಗಿಸುವಂತೆ ಕಾವೇರಿನೀರಾವರಿ ಇಲಾಖೆ ಅಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದಿದ್ದಾರೆ.

ಕಾಮಗಾರಿ ಮಾತ್ರ ಇನ್ನೂ ಪಿಲ್ಲರ್ ಹಂತದಲ್ಲೇ ಇದ್ದು, ಮೂರು ತಿಂಗಳಲ್ಲೇ ಮಳೆಗಾಲ ಆರಂಭವಾಗಲಿದೆ. ಅಷ್ಟರಲ್ಲಿ ಸೇತುವೆ ನಿರ್ಮಾಣ ಪೂರ್ಣಗೊಂಡು ಪ್ರವಾಹವನ್ನು ದಾಟಿಸುವುದೇ ಎನ್ನೋದು ಸ್ಥಳೀಯರ ಪ್ರಶ್ನೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *