ಲಕ್ನೋ : ಲಿವಿಂಗ್ ಟುಗೆದರ್ ರಿಲೇಶನ್‍ಶಿಪ್‍ನಲ್ಲಿ ಇರುವ ಪ್ರೇಮಿ ತನ್ನ ಗೆಳತಿಯ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದು ನದಿಗೆ ಎಸೆದಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್ ಗಂಜ್‍ನಲ್ಲಿ ನಡೆದಿದೆ.
ಆರೋಪಿ ಪ್ರೇಮಿಯನ್ನು ವೀರೇಂದ್ರ ಸಾಹ್ನಿ ಎಂದು ಗುರುತಿಸಲಾಗಿದೆ. ಪ್ರಿಯಕರನಿಂದ ಕೊಲೆಯಾದವಳು ಶರ್ಮಿಲಿ. ಈಕೆ ತನ್ನ ಪತಿಯಿಂದ ವಿಚ್ಛೇದನ ಪಡೆದು ವೀರೇಂದ್ರನೊಂದಿಗೆ ಸಂಬಂಧದಲ್ಲಿದ್ದಳು. ಈ ಸಮಯದಲ್ಲಿ ಮಹಿಳೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಪುರಂದರ್‍ಪುರ ಪೊಲೀಸ್ ಠಾಣೆ ಪ್ರದೇಶದ ತೆಹ್ರಿ ಘಾಟ್ ಗ್ರಾಮದಲ್ಲಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ವಾಸಿಸುತ್ತಿದ್ದ ಶರ್ಮಿಲಿ ಆರು ತಿಂಗಳ ಹಿಂದೆ ಕಾಣೆಯಾಗಿದ್ದಳು. ಆ ಸಮಯದಲ್ಲಿ ಮಹಿಳೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆಯನ್ನು ನಡೆಸುತ್ತಿದ್ದೆವು ಎಂದು ಪೊಲಿಸರು ತಿಳಿಸಿದ್ದಾರೆ.
ಠಾಣೆಯಲ್ಲಿ 2020ರ ಜುಲೈ ತಿಂಗಳಲ್ಲಿಯೇ ಕಿರುಕುಳ ಮತ್ತು ಅಪಹರಣ ಪ್ರಕರಣವನ್ನು ದಾಖಲಿಸಲಾಗಿತ್ತು. ಕೊರೊನಾದ ಕಾರಣ ತ್ವರಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಆರೋಪಿ ತಪ್ಪಿಸಿಕೊಂಡಿದ್ದನು. ಆದರೆ ಪ್ರಕರಣದ ತನಿಖೆ ಮತ್ತೆ ಪ್ರಾರಂಭವಾದಾಗ ಮಹಿಳೆಯ ಪ್ರೇಮಿಯನ್ನು ವಿಚಾರಿಸಿದಾಗ, ಅವನು ತನ್ನ ಅಪರಾಧವನ್ನು ಒಪ್ಪಿಕೊಂಡನು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ದಿನ ರಾತ್ರಿ ಇಬ್ಬರ ಮಧ್ಯೆ ಜಗಳವಾಯಿತ್ತು. ನಂತರ ಮಹಿಳೆ ಮನೆಯಿಂದ ಹೊರಹೋದಳು. ಈ ಸಮಯದಲ್ಲಿ ಆಕೆಯ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದೇನೆ. ಆಗ ಶರ್ಮಿಲಿ ಪ್ರಜ್ಞಾಹೀನಳಾಗಿ ಕುಸಿದುಬಿದ್ದಳು. ನಂತರ ಆಕೆಯನ್ನು ನದಿಗೆ ಎಸೆದಿದ್ದೇನೆ ಎಂದು ವೀರೇಂದ್ರ ಹೇಳಿದ್ದಾನೆ. ತಾನು ಮಾಡಿರುವ ಕೃತ್ಯವನ್ನು ಒಪ್ಪಿಕೊಂಡ ನಂತರ ಪೊಲೀಸರು ವೀರೇಂದ್ರ ಸಾಹ್ನಿಯನ್ನು ಬಂಧಿಸಿ ಮಂಗಳವಾರ ಜೈಲಿಗೆ ಕಳುಹಿಸಿದ್ದಾರೆ.