ಮೂರನೇ ಮದುವೆಯಾದ WWE ಸೂಪರ್ ಸ್ಟಾರ್ ಜಾನ್ ಸಿನಾ

Public TV
2 Min Read

– ಯಾರು ಈ ಶೇ ಶರಿಯತ್‍ಜಾಡೆ

ಫ್ಲೋರಿಡಾ: ಡಬ್ಯ್ಲುಡಬ್ಯ್ಲುಇ ಸೂಪರ್ ಸ್ಟಾರ್ ಜಾನ್ ಸಿನಾ ಅವರು ಮೂರನೇ ಬಾರಿಗೆ ವಿವಾಹವಾಗಿದ್ದು, ತಮ್ಮ ಗೆಳತಿ ಶೇ ಶರಿಯತ್‍ಜಾಡೆ ಅವರನ್ನು ವರಿಸಿದ್ದಾರೆ.

ಜಾನ್ ಸಿನಾ ಮದುವೆಯಾಗಿರುವುದನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಫ್ಲೋರಿಡಾದ ಸುದ್ದಿ ಮಾಧ್ಯಮಗಳು ಜಾನ್ ಸಿನಾ ಮತ್ತು ಶೇ ಶರಿಯತ್‍ಜಾಡೆ ಅವರು ಬುಧವಾರ ನಡೆದ ಸರಳ ಮತ್ತು ಶಾಂತ ರೀತಿಯ ಮದುವೆ ಕಾರ್ಯಕ್ರಮದಲ್ಲಿ ವಿವಾಹವಾಗಿದ್ದಾರೆ ಎಂದು ವರದಿ ಮಾಡಿವೆ. ಸಿನಾ ತನಗಿಂತ 12 ವರ್ಷ ಚಿಕ್ಕವರಾದ ಶೇ ಶರಿಯತ್‍ಜಾಡೆ ಅವರನ್ನು ಮೂರನೇ ಬಾರಿಗೆ ವಿವಾಹವಾಗಿದ್ದಾರೆ.

ಯಾರು ಈ ಶೇ ಶರಿಯತ್‍ಜಾಡೆ
ಶೇ ಶರಿಯತ್‍ಜಾಡೆ ಇರಾನ್‍ನಲ್ಲಿ ಜನಿಸಿದರೂ ಕೆನಡಾದ ಪ್ರಜೆಯಾಗಿದ್ದಾರೆ. 31 ವರ್ಷದ ಶೇ, ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ಜೊತೆಗೆ 2013ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಶರಿಯತ್‍ಜಾಡೆ ವ್ಯಾಂಕೋವರ್ ನಲ್ಲಿರುವ ಟೆಕ್ ಕಂಪನಿಯೊಂದರಲ್ಲಿ ಉತ್ಪನ್ನ ಮಟ್ಟದ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಜಾನ್ ಸಿನಾ ಮತ್ತು ಶೇ ಶರಿಯತ್‍ಜಾಡೆ ಮೊದಲ ಬಾರಿಗೆ ಭೇಟಿಯಾಗಿದ್ದು, 2019ರಲ್ಲಿ ನಡೆದ ಡಬ್ಯ್ಲುಡಬ್ಯ್ಲುಇ ತಾರೆಯರ ಚಿತ್ರೀಕರಣದ ಸಮಯದಲ್ಲಿ. ಈ ವೇಳೆ ಪರಿಚಯವಾದ ಸಿನಾ ಮತ್ತು ಶರಿಯತ್‍ಜಾಡೆ ನಂತರ ಪ್ರೇಮಪಾಶದಲ್ಲಿ ಬಂಧಿಯಾಗಿದ್ದರು. ಇದಾದ ನಂತರ ಪ್ಲೇಯಿಂಗ್ ವಿತ್ ಫೈರ್ ಇನ್ ವ್ಯಾಂಕೋವರ್ ಎಂಬ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ರೆಡ್ ಕಾರ್ಪೆಟ್‍ನಲ್ಲಿ ಕಾಣಿಸಿಕೊಂಡಿದ್ದರು.

ಸಿನಾಗಿದು ಮೂರನೇ ಮದ್ವೆ
43 ವರ್ಷದ ಜಾನ್ ಸಿನಾ ಈಗಾಗಲೇ ಇಬ್ಬರನ್ನು ಮದುವೆಯಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. 1999ರಲ್ಲಿ ಡಬ್ಯ್ಲುಡಬ್ಯ್ಲುಇಗೆ ಪಾದಾರ್ಪಣೆ ಮಾಡಿದ ಸಿನಾ 2009ರಲ್ಲಿ ಡಬ್ಯ್ಲುಡಬ್ಯ್ಲುಇ ಲೇಡಿ ಸೂಪರ್ ಸ್ಟಾರ್ ಎಲಿಜಬೆತ್ ಹಬಡ್ರ್ಯೂ ಅವರನ್ನು ವಿವಾಹವಾಗಿದ್ದರು. ಆದರೆ 2012ರಲ್ಲಿ ಈ ಜೋಡಿ ವಿಚ್ಛೇದನ ಪಡೆದು ಬೇರೆಯಾಗಿತ್ತು. ಇದಾದ ನಂತರ ಸಿನಾ ಡಬ್ಯ್ಲುಡಬ್ಯ್ಲುಇದ ಲೇಡಿ ಕುಸ್ತಿಪಟು ನಿಕ್ಕಿ ಬೆಲ್ಲಾ ಅವರ ಜೊತೆ ಡೇಟಿಂಗ್‍ನಲ್ಲಿ ಇದ್ದರು.

ಸುಮಾರು ಐದು ವರ್ಷಗಳ ಕಾಲ ಜೊತೆಗಿದ್ದ ಸಿನಾ ಮತ್ತು ನಿಕ್ಕಿ ಬೆಲ್ಲಾ ಜೋಡಿ 2018ರಲ್ಲಿ ತಾವು ಬೇರೆಯಾಗುತ್ತೇವೆ ಎಂದು ಘೋಷಿಸಿಕೊಂಡಿತ್ತು. ಇದಾದ ನಂತರ 2019ರಲ್ಲಿ ನಿಕ್ಕಿ ಡ್ಯಾನ್ಸರ್ ಆರ್ಟೆಮ್ ಜೊತೆ ಮದುವೆಯಾದರು. ಜೊತೆಗೆ ಅವರಿಗೆ 2020ರ ಜುಲೈನಲ್ಲಿ ಮಗು ಜನಿಸಿದೆ. ಈಗ ಸಿನಾ ಶೇ ಶರಿಯತ್‍ಜಾಡೆ ಅವರನ್ನು ವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *