ಮೂರನೇ ಅಲೆ ಅಪ್ಪಳಿಸುವ ದಿನ ದೂರ ಇಲ್ಲ- ಉಡುಪಿ ಡಿಎಚ್‍ಒ ಆತಂಕಕಾರಿ ಮಾಹಿತಿ

Public TV
2 Min Read

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯ ಜನ ಅಸಡ್ಡೆ ಮಾಡಿದರೆ, ಕೊರೊನಾ ಸಾಂಕ್ರಾಮಿಕವನ್ನು ನಿರ್ಲಕ್ಷ್ಯ ಮಾಡಿದರೆ ಮೂರನೇ ಅಲೆ ಅಪ್ಪಳಿಸುವ ದಿನ ದೂರ ಇಲ್ಲ ಎಂದು ಉಡುಪಿ ಡಿಎಚ್‍ಒ ಡಾ. ನಾಗಭೂಷಣ ಉಡುಪ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಕಳೆದ ಒಂದು ವಾರದಲ್ಲಿ ಸಿಕ್ಕಾಪಟ್ಟೆ ಏರುಪೇರಾಗುತ್ತಿದೆ. ಕಳೆದ ಮಂಗಳವಾರ ಜಿಲ್ಲೆಯ ಪಾಸಿಟಿವಿಟಿ ರೇಟ್ ಶೇ. 10ರ ಗಡಿ ದಾಟಿತ್ತು. ವಾರದ ಹಿಂದೆ ಶೇಕಡಾ 9 ಪಾಸಿಟಿವಿಟಿ ರೇಟ್ ಜಿಲ್ಲೆಯಲ್ಲಿ ದಾಖಲಾಗಿತ್ತು. ಇದಾಗುತ್ತಲೇ ಜಿಲ್ಲೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಪ್ರತಿದಿನ ಐದು ಸಾವಿರಕ್ಕೂ ಹೆಚ್ಚು ಟೆಸ್ಟಿಂಗ್ ಮಾಡುತ್ತಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಎಚ್‍ಒ ಡಾ. ಉಡುಪ, ಆತಂಕಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಜನರಲ್ಲಿ ನಾನು ವಿನಂತಿ ಮಾಡುವುದು ಇಷ್ಟೆ. ಕೊರೊನಾ ಎರಡನೆಯ ಅಲೆ ಕಡಿಮೆಯಾಯ್ತು ಎಂದು ನಿಟ್ಟುಸಿರು ಬಿಡುವ ಸಂದರ್ಭ ಇದಲ್ಲ. ಕೊರೊನಾ ಮೂರನೇ ಅಲೆ ಆರಂಭವಾಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ 1 ಮತ್ತು 2 ಶೇಕಡಾದ ನಡುವೆ ಇತ್ತು. ಈಗ ಪಾಸಿಟಿವಿಟಿ ರೇಟ್ 5- 6ಕ್ಕೆ ತಲುಪುತ್ತಿದೆ. ಕಾರ್ಕಳ ತಾಲೂಕಿನಲ್ಲಿ ಸೋಮವಾರ ಶೇಕಡಾ 8 ಪಾಸಿಟಿವಿಟಿ ರೇಟ್ ದಾಖಲಾಗಿದೆ.

ಜನ ಸರ್ಕಾರದ ಮಾರ್ಗಸೂಚಿ ಮರೆತಿದ್ದಾರೆ:
ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಜನರು ಎಲ್ಲರೂ ಪಾಲಿಸಬೇಕು. ಸರ್ಕಾರ ಮತ್ತುಆರೋಗ್ಯ ಇಲಾಖೆ ಟೆಸ್ಟಿಂಗನ್ನು ಹೆಚ್ಚು ಮಾಡಬೇಕು ಎಂದು ಈಗಾಗಲೇ ಸೂಚನೆ ನೀಡಿದೆ. ಗ್ರಾಮ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಲೇಜ್ ಟಾಸ್ಕ್ ಫೋರ್ಸ್ ಸಕ್ರಿಯವಾಗಿ ಕೆಲಸ ಆರಂಭಿಸಿದೆ. ಉಡುಪಿ ಜಿಲ್ಲಾ ಸಿಇಓ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಡಾ.ನಾಗಭೂಷಣ ಉಡುಪ ಮಾಹಿತಿ ನೀಡಿದರು.

ಆರೋಗ್ಯ ಇಲಾಖೆ ಜಿಲ್ಲೆಯ ಅಧಿಕಾರಿಗಳ ಜೊತೆ ಸಮನ್ವಯ ಮಾಡಿಕೊಂಡು ಕೊರೊನಾ ನಿಯಂತ್ರಿಸುವ ಪಣ ತೊಟ್ಟಿದ್ದೇವೆ. ರೋಗದ ಯಾವುದೇ ಲಕ್ಷಣಗಳು ಕಂಡುಬಂದರೂ ಟೆಸ್ಟ್ ಮಾಡಿಸಿಕೊಳ್ಳಲು ಹಿಂಜರಿಯಬೇಡಿ. ಕೋವಿಡ್ ಬಂದ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಕೊಡಬೇಕು ಎಂಬುದು ನಮ್ಮ ಉದ್ದೇಶ. ಪ್ರಾಥಮಿಕ ಸಂಪರ್ಕದಿಂದಲೇ ಅತಿ ಹೆಚ್ಚು ಪಾಸಿಟಿವ್ ಬರ್ತಾ ಇರೋದು ಈ ನಿರ್ಧಾರಕ್ಕೆ ಕಾರಣ.

ಲಾಕ್‍ಡೌನ್ ದಿನಗಳನ್ನು ನೆನಪಿಸಿಕೊಳ್ಳಿ
ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಪ್ಪಿಸಲು ಕೋವಿಡ್ ಕೇರ್ ಸೆಂಟರ್ ನಲ್ಲಿ ಮಾತ್ರ ಚಿಕಿತ್ಸೆ ಕೊಡಬೇಕು. ಸೋಂಕು ನಿಯಂತ್ರಣಕ್ಕೆ ಇದೊಂದೇ ದಾರಿ ಎಂದು ನಾವು ಸಭೆಯಲ್ಲಿ ನಿರ್ಧರಿಸಿದ್ದೇವೆ. ಅಗತ್ಯ ಇಲ್ಲದೆ ತಿರುಗಾಟ ಮಾಡುವುದನ್ನು ಜನ ನಿಲ್ಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಜನ ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವುದನ್ನು ಕಡಿಮೆ ಮಾಡಬೇಕು. ಕೊರೊನಾ ಕಡಿಮೆಯಾಗಿದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಬರುವುದು ಬೇಡ. ಜನ ತಮ್ಮ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು ಎಂದು ಡಾ. ನಾಗಭೂಷಣ ಉಡುಪ ಪಬ್ಲಿಕ್ ಟಿವಿ ಮೂಲಕ ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *