ಮುಸ್ಲಿಮರು, ನಾಯಿಗಳಿಗೆ ಪ್ರವೇಶವಿಲ್ಲ – ವೈರಲ್ ಆಯ್ತು ಅಪಾರ್ಟ್‍ಮೆಂಟ್ ನಿಯಮದ ಪೋಸ್ಟ್

Public TV
2 Min Read

ಮುಂಬೈ: 3ಬಿಎಚ್‍ಕೆ ಫ್ಲ್ಯಾಟ್ ಲಭ್ಯವಿದೆ. ಆದರೆ ಮುಸ್ಲಿಮರು, ನಾಯಿಗಳಿಗೆ ಪ್ರವೇಶವಿಲ್ಲ ಎಂದು ಮುಂಬೈ ನಗರದ ಅಪಾರ್ಟ್‍ಮೆಂಟ್ ಮಾಲೀಕ ಹಾಕಿರುವ ಟು ಲೆಟ್ ಫಲಕ ಈಗ ವಿವಾದಕ್ಕೆ ಕಾರಣವಾಗಿದೆ.

3 ಬಿಎಚ್‍ಕೆ ನಿವಾಸ ಭೋಗ್ಯಕ್ಕೆ ಲಭ್ಯವಿದೆ. ಆದರೆ ಮುಸ್ಲಿಮರು ಹಾಗೂ ನಾಯಿಗಳನ್ನು ಹೊಂದಿರುವವರಿಗೆ ಪ್ರವೇಶವಿಲ್ಲ ಎಂದು ಹಾಕಿದ್ದಾರೆ. ಮುಂಬೈ ನಿವಾಸಿ ಅನ್ಮೆಶ್ ಪಾಟೀಲ್ ಈ ನಿಯಮಗಳು ಹಾಗೂ ಫ್ಲ್ಯಾಟ್‍ನ ಚಿತ್ರವನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗಿದೆ. ವರ್ಣಬೇಧ ನೀತಿಗೆ ಇದೊಂದು ಉದಾಹರಣೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತೆ ರಾಣಾ ಅಯ್ಯುಬ್ ಈ ಪೋಸ್ಟ್ ಶೇರ್ ಮಾಡಿ, ಮುಸ್ಲಿಮರು ಹಾಗೂ ನಾಯಿಗಳಿಗೆ ಪ್ರವೇಶವಿಲ್ಲ ಎಂಬುದು ಮುಂಬೈನ ಬಾಂದ್ರಾದಲ್ಲಿ ಸೊಗಸಾದ ವಿಳಾಸವಾಗಿದೆ. ಇದು 20ನೇ ಶತಮಾನದ ಭಾರತ, ನಮ್ಮದು ಕೋಮುವಾದಿ ರಾಷ್ಟ್ರವಲ್ಲ. ಇದು ವರ್ಣಬೇಧ ನೀತಿಯಲ್ಲವೇ ಹೇಳಿ ಎಂದು ಪ್ರಶ್ನಿಸಿದ್ದಾರೆ.

ನಾನೂ ಸಹ ಕಳೆದ ಮೂರು ತಿಂಗಳಿಂದ ಬಾಂದ್ರಾದಲ್ಲಿ ಮನೆ ಹುಡುಕುತ್ತಿದ್ದೇನೆ. ನನ್ನ ಹೆಸರು ರಾಣಾ ಇದು ಮುಸ್ಲಿಂ ಹೆಸರಲ್ಲ ಎಂಬುದು ಹಲವು ಮಾಲೀಕರಿಗೆ ತಿಳಿಯುತ್ತದೆ. ಆದರೆ ನಮ್ಮ ಸರ್‍ನೇಮ್ ಶೇಖ್ ಎಂಬುದನ್ನು ಓದಿದಾಗ ನಮ್ಮ ಬ್ರೋಕರ್ ಕಡೆಯಿಂದ ಕರೆ ಬರುತ್ತದೆ. ಆಗ ಬ್ರೋಕರ್ ಅಸಹ್ಯಕರವಾಗಿ ಕ್ಷಮೆಯಾಚಿಸುತ್ತಾರೆ ಎಂದು ಅವರು ತಮ್ಮ ಮನೆ ಹುಡುಕುವ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ಪಾಕಿಸ್ತಾನ ರಾಷ್ಟ್ರಪತಿ ಡಾ.ಆರೀಫ್ ಅಲ್ವಿ ಅವರ ಗಮನ ಸೆಳೆದಿದ್ದು, ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಿಂದುತ್ವ ಹಾಗೂ ಆರ್‍ಎಸ್‍ಎಸ್‍ನ ಉಗ್ರಗಾಮಿ ಮತ್ತು ತತ್ವಶಾಸ್ತ್ರದಿಂದ ಪ್ರೋತ್ಸಾಹಿಸಲ್ಪಟ್ಟ ಸಮಾಜ ಮಾತ್ರ ಇದನ್ನು ಈ ರೀತಿಯಾಗಲು ಬಿಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ, ವಿರೋಧ ಚರ್ಚೆಗಳು ನಡೆಯುತ್ತಿದ್ದು, ಹಲವರು ಈ ಕುರಿತು ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಹಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಮನೆಯ ಮಾಲೀಕ ಸಹ ತಮ್ಮ ನಿಯಮಗಳನ್ನು ಸಮರ್ಥಿಸಿಕೊಂಡಿದ್ದು, ಇದು ಖಾಸಗಿ ಆಸ್ತಿ, ನನ್ನ ಮನೆಗೆ ಯಾರು ಬಾಡಿಗೆಗೆ ಬರಬೇಕು ಎಂಬುದನ್ನು ನಿರ್ಧರಿಸುವ ಎಲ್ಲ ಹಕ್ಕನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *