ಮುನಿರತ್ನ ಸಚಿವರಾಗುವುದು ನಿಶ್ಚಿತ : ಸಚಿವ ಬೈರತಿ ಬಸವರಾಜ್

Public TV
1 Min Read

ದಾವಣಗೆರೆ: ಶಾಸಕ ಮುನಿರತ್ನ ಶೀಘ್ರವೇ ಸಚಿವರಾಗುತ್ತಾರೆ ಸಿಎಂ ಈಗಾಗಲೇ ಸಚಿವ ಸ್ಥಾನ ನೀಡಲು ಒಪ್ಪಿಕೊಂಡಿದ್ದಾರೆ ಎಂದು ದಾವಣಗೆರೆಯಲ್ಲಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.

ದಾವಣಗೆರೆಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ ನಿಯಂತ್ರಣ ಕ್ರಮಗಳ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕ ಮುನಿರತ್ನ ಅವರು ಸಚಿವರಾಗುವುದು ನಿಶ್ಚಿತವಾಗಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಒಪ್ಪಿಗೆ ನೀಡಿದ್ದಾರೆ. ನಾವು 17 ಜನ ಶಾಸಕರು ನೆಮ್ಮದಿಯಿಂದ ಇದ್ದೇವೋ, ಇಲ್ಲವೋ ಎಂಬುದರ ಬಗ್ಗೆ ಸೂಕ್ತ ವೇದಿಕೆಯಲ್ಲಿ ಉತ್ತರಿಸುತ್ತೇನೆ ಎಂದು ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದ ಮೃತಪಟ್ಟ ಎಲ್ಲ ಕುಟುಂಬಗಳಿಗೂ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಕೊರೊನಾ ಮೊದಲನೇ ಅಲೆಯಲ್ಲಿ 264 ಜನ ಹಾಗೂ ಈ ವರ್ಷ ಮಾರ್ಚ್ ನಿಂದ ಈವರೆಗಿನ ಎರಡನೆ ಅಲೆಯಲ್ಲಿ 273 ಜನ ಸೇರಿದಂತೆ ಒಟ್ಟು 537 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಮೃತಪಟ್ಟ ಸೋಂಕಿತರ ಬಿಪಿಎಲ್ ಕುಟುಂಬದ ವ್ಯಕ್ತಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದಿದ್ದಾರೆ.

ಬಿಪಿಎಲ್, ಎಪಿಎಲ್ ಎಂಬ ತಾರತಮ್ಯವಿಲ್ಲದೆ ಎಲ್ಲರಿಗೂ ಪರಿಹಾರ ನೀಡುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಸೋಂಕಿನಿಂದ ಮೃತಪಟ್ಟಿದ್ದು, ಪ್ರತಿ ವ್ಯಕ್ತಿಗೆ 01 ಲಕ್ಷ ರೂಪಾಯಿಗಳಂತೆ ಪರಿಹಾರ ನೀಡಿದರೆ, 5.37 ಕೋಟಿ ರೂ. ಅನುದಾನ ಜಿಲ್ಲೆಗೆ ಬೇಕಾಗುತ್ತದೆ. ಆದಷ್ಟು ಶೀಘ್ರ ಮುಖ್ಯಮಂತ್ರಿಗಳು ಈ ಕುರಿತು ನಿರ್ಧಾರ ಕೈಗೊಳ್ಳುವರು ಎಂದರು.

Share This Article
Leave a Comment

Leave a Reply

Your email address will not be published. Required fields are marked *