ಮುನಿರತ್ನಗೆ ಬಿಗ್ ರಿಲೀಫ್ – ಆರ್‍ಆರ್ ನಗರ ಎಲೆಕ್ಷನ್‍ಗೆ ಸುಪ್ರೀಂ ಗ್ರೀನ್ ಸಿಗ್ನಲ್

Public TV
2 Min Read

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಅವಕಾಶ ಕೊಡಬಾರದು ಎಂದು ಬಿಜೆಪಿಯ ನಾಯಕ ತುಳಸಿ ಮುನಿರಾಜು ಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈ ಮೂಲಕ ಮಾಜಿ ಶಾಸಕ ಮುನಿರತ್ನ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಅರ್ಜಿ ವಿಚಾರಣೆ ನಡೆಸಿರುವ ಮುಖ್ಯ ನ್ಯಾ. ಎಸ್.ಎ ಬೊಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ಚುನಾವಣೆಗೆ ತಡೆ ನಿಡಲು ನಿರಾಕರಿಸಿದೆ. ಈಗಾಗಲೇ ಚುನಾವಣೆ ದಿನಾಂಕ ಪ್ರಕಟವಾಗಿದ್ದು ಅಕ್ಟೋಬರ್ 16ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹೀಗಾಗಿ ನಿಗದಿತ ವೇಳಾಪಟ್ಟಿಯಂತೆ ನವೆಂಬರ್ 3ಕ್ಕೆ ಆರ್ ಆರ್ ನಗರದಲ್ಲಿಯೂ ಉಪಚುನಾವಣೆ ನಡೆಯಲಿದೆ. ಸದ್ಯ ಕೋರ್ಟ್ ಆದೇಶದಿಂದ ನಿರಾಳರಾಗಿರುವ ಮುನಿರತ್ನ ಅವರು ಆರ್ ಆರ್ ನಗರದಲ್ಲಿ ಸ್ಪರ್ಧಿಸುವ ಹಾದಿ ಸುಗಮವಾಗಿದೆ.

ಆರೋಪ ಏನು?
ರಾಜ್ಯ ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆ ಸಂದರ್ಭ ಆರ್.ಆರ್. ನಗರ ಕ್ಷೇತ್ರದ ಅಭ್ಯರ್ಥಿ ಮುನಿರತ್ನ ಅವರು ಅಕ್ರಮ ಎಸಗಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ತುಳಸಿ ಮುನಿರಾಜುಗೌಡ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಚುನಾವಣೆ ವೇಳೆ ಕ್ಷೇತ್ರದಲ್ಲಿ ಮತದಾರರ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಈ ಅಕ್ರಮದಲ್ಲಿ ಮುನಿರತ್ನ ಭಾಗಿಯಾದ ಆರೋಪವಿದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಹತ್ತಿರದ ಪ್ರತಿಸ್ಪರ್ಧಿಯಾಗಿದ್ದ ನನ್ನನ್ನು ಜಯಶಾಲಿ ಎಂದು ಘೋಷಿಸಬೇಕು ಎಂದು ಕೋರಿ ಮುನಿರಾಜು ಗೌಡ ಕೋರಿದ್ದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ಬಳಿಕ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದ ಮುನಿರತ್ನ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕಾನೂನು ಅಡಿ ಆರು ತಿಂಗಳಲ್ಲಿ ಜನಪ್ರತಿನಿಧಿ ಆಯ್ಕೆಯಾಗಬೇಕು ಎಂದು ಸೂಚನೆ ನೀಡಿತ್ತು. ಹೈಕೋರ್ಟ್ ನಿರ್ದೇಶನ ಮೇರೆಗೆ ಚುನಾವಣೆ ಆಯೋಗದಿಂದ ಚುನಾವಣೆಗೆ ದಿನಾಂಕ ಪ್ರಕಟಿಸಲಾಗಿತ್ತು. ಈ ವೇಳೆ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ ಮುನಿರಾಜು ಗೌಡ ಹೈಕೋರ್ಟಿನಲ್ಲಿ ಅರ್ಜಿ ಇತ್ಯರ್ಥ ಆಗುವವರೆಗೆ ಕ್ಷೇತ್ರದ ಉಪ ಚುನಾವಣೆ ನಡೆಸಕೂಡದು ಎಂದು ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದರು.

ತಮ್ಮ ಮೇಲಿನ ಆರೋಪದಲ್ಲಿ ಹುರುಳಿಲ್ಲದ್ದರಿಂದ ಕ್ಷೇತ್ರದಲ್ಲಿ ಚುನಾವಣೆ ನಡೆಯುವ ಅಗತ್ಯ ಇದೆ ಎಂದು ಮುನಿರತ್ನ ಪರ ವಕೀಲರು ವಾದ ಮಂಡಿಸಿದ್ದರು. ಪ್ರಕರಣದಲ್ಲಿ ತಮ್ಮನ್ನು ಪರಿಗಣಿಸುವಂತೆ ಸುಪ್ರೀಂಗೆ ಕೇವಿಯೇಟ್ ಸಲ್ಲಿಸಿದ್ದರು. ಕ್ಷೇತ್ರವು ಶಾಸಕರಿಲ್ಲದೆ ಹಲವು ತಿಂಗಳುಗಳು ಕಳೆದಿದ್ದು, ಚುನಾವಣೆ ನಡೆಸಬೇಕು. ಇದೀಗ ಕ್ಷೇತ್ರದ ಉಪಚುನಾವಣೆ ಘೋಷಿಸಲಾಗಿದ್ದು ತಡೆ ನೀಡಬಾರದು ಎಂದು ಮನವಿ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *