ಮುಕೇಶ್‌ ಅಂಬಾನಿಯಿಂದ ಬಿಗ್‌ ಬಜಾರ್‌ ಶಾಪಿಂಗ್‌ – ರಿಲಯನ್ಸ್‌ ಪ್ಲ್ಯಾನ್‌ ಏನು?

Public TV
2 Min Read

ಮುಂಬೈ: ಫೇಸ್‌ಬುಕ್‌ ಜೊತೆ ಸೇರಿ ಕಿರಾಣಿ ಉದ್ಯಮಗಳಿಗೆ ಸಹಾಯ ಮಾಡಲು ಜಿಯೋ ಮಾರ್ಟ್‌ ತೆರೆದಿದ್ದ ಮುಕೇಶ್‌ ಅಂಬಾನಿ ಈಗ ಸೂಪರ್‌ ಮಾರ್ಕೆಟ್‌ ಕಂಪನಿ ಬಿಗ್‌ ಬಜಾರ್‌ ಅನ್ನೇ ಶಾಪಿಂಗ್‌ ಮಾಡಿದ್ದಾರೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಬಿಗ್‌ ಬಜಾರ್‌ ಮಾಲೀಕತ್ವ ಹೊಂದಿರುವ ಫ್ಯೂಚರ್‌ ಗ್ರೂಪ್‌ ಅನ್ನು 24,713 ಕೋಟಿ ರೂ.ಗಳಿಗೆ ಖರೀದಿಸಿದೆ. ಫ್ಯೂಚರ್‌ ಗ್ರೂಪ್‌ ತನ್ನ ಐದು ಕಂಪನಿಗಳನ್ನು ಒಟ್ಟು ಸೇರಿಸಿ ‘ಫ್ಯೂಚರ್‌ ಎಂಟರ್‌ಪ್ರೈಸಸ್‌’ ಹೆಸರಿನಲ್ಲಿ ರಿಲಯನ್ಸ್‌ಗೆ ಮಾರಾಟ ಮಾಡಿದೆ. ಇದನ್ನೂ ಓದಿ: ಫೇಸ್‌ಬುಕ್‌ ಬಳಿಕ ಜಿಯೋದಲ್ಲಿ ಭಾರೀ ಹೂಡಿಕೆ ಮಾಡಲಿದೆ ಗೂಗಲ್‌

ಕಿಶೋರ್‌ ಬಿಯಾನಿ ಮಾಲಿಕತ್ವದ ಫ್ಯೂಚರ್‌ ಗ್ರೂಪ್‌ ಬಿಗ್‌ ಬಜಾರ್‌, ಫುಡ್‌ ಬಜಾರ್‌, ಲೈಫ್‌ಸ್ಟೈಲ್‌ ಸ್ಟೋರ್‌ಗಳನ್ನು ಒಳಗೊಂಡಿದೆ. ಫ್ಯೂಚರ್‌ ಗ್ರೂಪ್‌ ಬ್ರ್ಯಾಂಡ್‌ ಫ್ಯಾಕ್ಟರಿ, ನೀಲಗಿರೀಸ್‌, ಎಫ್‌ಬಿಬಿ, ಸೆಂಟ್ರಲ್‌, ಈಸಿಡೇನಂಥ ಮಳಿಗೆಗಳು, ಲೀ ಕೂಪರ್‌, ಹೆರಿಟೇಜ್‌ ಫ್ರೆಷ್‌, ಗೋಲ್ಡನ್‌ ಹಾರ್ವೆಸ್ಟ್‌, ಡಿಜೆ & ಜಿ, ಕೊರ್ಯೋ ಮೊದಲಾದ ಬ್ರ್ಯಾಂಡ್‌ಗಳನ್ನು ಹೊಂದಿದೆ. ಇನ್ನು ಮುಂದೆ ಇವುಗಳೆಲ್ಲ ರಿಲಯನ್ಸ್‌ ಇಂಡಸ್ಟ್ರೀಸ್‌ ಒಡೆತನಕ್ಕೆ ಸೇರಲಿವೆ. ಇದನ್ನೂ ಓದಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

ಫ್ಯೂಚರ್‌ ಗ್ರೂಪ್‌ನ ಸಾಲ ಪಾವತಿಗೆ ರಿಲಯನ್ಸ್‌ 13 ಸಾವಿರ ಕೋಟಿ ರೂಪಾಯಿ ನೀಡಲಿದ್ದರೆ, ಬಾಕಿ ಪಾವತಿಗೆ 7 ಸಾವಿರ ಕೋಟಿ ರೂಪಾಯಿ ನೀಡಲಿದೆ. ದೇಶದ ಒಟ್ಟು 420 ನಗರಗಳಲ್ಲಿ ಬಿಗ್‌ ಬಜಾರ್‌ ಮಳಿಗೆಗಳನ್ನು ತೆರೆದಿದೆ. ಫ್ಯೂಚರ್‌ ಗ್ರೂಪ್‌ ಖರೀದಿಯೊಂದಿಗೆ ರಿಲಯನ್ಸ್‌ ತೆಕ್ಕೆಗೆ ಒಟ್ಟು 1,800 ಮಳಿಗೆಗಳು ಸಿಗಲಿವೆ.

ಮಾರಾಟ ಮಾಡಿದ್ದು ಯಾಕೆ?
2001ರಲ್ಲಿ ಮೊದಲ ಬಿಗ್‌ ಬಜಾರ್‌ ಮಳಿಗೆ ಸ್ಥಾಪನೆಗೊಂಡಿತ್ತು. 2007ರಲ್ಲಿ ಫ್ಯೂಚರ್‌ ಗ್ರೂಪ್‌ ವಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿತ್ತು. ಈ ಸಂದರ್ಭದಲ್ಲಿ ವಿಶ್ವದಲ್ಲಿ ಆರ್ಥಿಕ ಕುಸಿತ ಸಂಭವಿಸಿತ್ತು. ಇದರಿಂದಾಗಿ ಫ್ಯೂಚರ್‌ ಗ್ರೂಪ್‌ಗೆ ಮೊದಲ ಪೆಟ್ಟು ಬಿದ್ದಿತ್ತು. ಇದಾದ ನಂತರ ಭಾರತದಲ್ಲಿನ ಆನ್‌ಲೈನ್‌ ಶಾಪಿಂಗ್‌ ಮಾರುಕಟ್ಟೆ ಬೆಳವಣಿಗೆ ಭಾರೀ ಹೊಡೆತ ನೀಡಿತು. ಇದರಿಂದಾಗಿ ಕಂಪನಿಯ ಸಾಲ ಏರತೊಡಗಿತು. ಈ ವರ್ಷ ಕೋವಿಡ್‌ 19ನಿಂದ ಮತ್ತಷ್ಟು ಸಂಕಷ್ಟಕ್ಕೆ ಈಡಾಗಿತ್ತು. ಈ ಕಾರಣಕ್ಕೆ ಕಿಶೋರ್‌ ಬಿಯಾನಿ ಫ್ಯೂಚರ್‌ ಗ್ರೂಪ್‌ ಅನ್ನೇ ಮಾರಾಟ ಮಾಡಿದ್ದಾರೆ.

ರೇಟಿಂಗ್ ಏಜೆನ್ಸಿ ಐಸಿಆರ್‌ಎ(ಕ್ರೇಡಿಟ್‌ ರೇಟಿಂಗ್‌ ಏಜೆನ್ಸಿ ಆಫ್‌ ಇಂಡಿಯಾ) ಪ್ರಕಾರ, ಫ್ಯೂಚರ್ ಗ್ರೂಪ್‌ ಕಂಪನಿಗಳ ಸಾಲವು 2019ರ ಮಾರ್ಚ್‌ ವೇಳೆಗೆ 10,951 ಕೋಟಿ ರೂ. ಇದ್ದರೆ 2019 ರ ಸೆಪ್ಟೆಂಬರ್ 30 ರ ವೇಳೆಗೆ 12,778 ಕೋಟಿ ರೂ.ಗೆ ಏರಿಕೆ ಆಗಿತ್ತು.

ಮುಕೇಶ್‌ ಅಂಬಾನಿ ಪ್ಲಾನ್ ಏನು‌?
ಮುಕೇಶ್‌ ಅಂಬಾನಿ ಇಂಧನ ಕ್ಷೇತ್ರದ ಬಳಿಕ ತಮ್ಮ ಹೂಡಿಕೆಯನ್ನು ಟೆಲಿಕಾಂ ಕಂಪನಿಯಲ್ಲಿ ಮಾಡಿದ್ದರು. ಜಿಯೋ ಸ್ಥಾಪಿಸಿ ಕಡಿಮೆ ದರದಲ್ಲಿ ಡೇಟಾ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯನ್ನೇ ಅಲುಗಡಿಸಿದ್ದರು. ಈಗ ಕಿರಾಣಿ ಮತ್ತು ರಿಟೇಲ್‌ ವ್ಯವಹಾರದತ್ತ ಅಂಬಾನಿ ಕಣ್ಣು ಹಾಕಿದ್ದಾರೆ. ಈಗಾಗಲೇ ಜಿಯೋದಲ್ಲಿ ಫೇಸ್‌ಬುಕ್‌ 43,573.62 ಕೋಟಿ ರೂ.(ಶೇ.9.99) ಹೂಡಿಕೆ ಮಾಡಿದೆ. ವ್ಯವಹಾರದ ಮುಂದಿನ ಭಾಗವಾಗಿ ಮುಕೇಶ್‌ ಅಂಬಾನಿ ಫ್ಯೂಚರ್‌ ಗ್ರೂಪ್‌ ಕಂಪನಿಗಳನ್ನು ಖರೀದಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *