ಮುಂಬೈ ಮೀನು ಮಾರುಕಟ್ಟೆಯಿಂದ ವಕ್ಕರಿಸಿದ ಕೊರೊನಾ – ಬಳ್ಳಾರಿಯಲ್ಲಿ 11 ಮಂದಿಗೆ ಸೋಂಕು

Public TV
1 Min Read

ಬಳ್ಳಾರಿ: ಮುಂಬೈ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡಿ ವಾಪಸ್ಸಾಗಿ ಕ್ವಾರಂಟೈನ್‍ನಲ್ಲಿದ್ದ ಜಿಲ್ಲೆಯ 11 ಮಂದಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 30ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಕುಟುಂಬಗಳ ಸೋಂಕಿತರಲ್ಲಿ ಏಳು ಮಹಿಳೆಯರು, ಮೂವರು ಪುರುಷರು ಮತ್ತು ಓರ್ವ ಅಲ್ಪಸಂಖ್ಯಾತರಿದ್ದಾರೆ. ಮಹಿಳೆಯರ ಪೈಕಿ ಒಬ್ಬರು ಎಂಟು ತಿಂಗಳ ಗರ್ಭಿಣಿ ಮತ್ತು ಒಬ್ಬ ಬಾಣಂತಿ ಇದ್ದಾರೆ. ಅವರೆಲ್ಲರನ್ನು ಬುಧವಾರ ರಾತ್ರಿಯೇ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಬಳ್ಳಾರಿ ನಗರದ 6, ಬಳ್ಳಾರಿ ತಾಲೂಕಿನ ರೂಪನಗುಡಿಯ 3 ಮತ್ತು ಚಾಗನೂರಿನ ಇಬ್ಬರಿಗೆ ಸೋಂಕು ತಗುಲಿದೆ. ಬಾಣಂತಿಯ 9 ತಿಂಗಳ ಹಸುಗೂಸಿನ ಜೊತೆ ಅಜ್ಜ-ಅಜ್ಜಿ ಬಳಿ ಇದ್ದರು. ಹೀಗಾಗಿ ಅವರ ಗಂಟಲ ದ್ರವದ ಮಾದರಿಯನ್ನು ತಜ್ಞರ ನೆರವಿನೊಂದಿಗೆ ತೆಗೆದು ಪ್ರಯೋಗಾಲಯಕ್ಕೆ ಕಳಿಸಲಾಗುವುದು. 11 ಸೋಂಕಿತರೊಂದಿಗೆ ಮೊದಲ ಹಂತದ ಸಂಪರ್ಕ ಹೊಂದಿದ್ದ 49 ಮಂದಿ ಸೇರಿದಂತೆ 187 ಮಂದಿಯನ್ನು ಕ್ವಾರಂಟೈನ್ ಕೇಂದ್ರಗಳಲ್ಲಿರಿಸಲಾಗಿದೆ ಎಂದು ನಕುಲ್ ವಿವರಿಸಿದ್ದಾರೆ.

ಮೇ 6 ರಂದು ಅನಂತಪುರದ ಜಿಲ್ಲಾಧಿಕಾರಿ ನೀಡಿದ ಮಾಹಿತಿ ಅನ್ವಯ 65 ಜನರನ್ನು ಗುಂತಕಲ್ ರೈಲು ನಿಲ್ದಾಣದಿಂದ ನೇರವಾಗಿ ಕ್ವಾರಂಟೈನ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲಾಗಿತ್ತು. ಹೀಗಾಗಿ ಅವರ ಊರುಗಳಲ್ಲಿ ಕಂಟೈನ್ಮೆಂಟ್ ಪ್ರದೇಶಗಳನ್ನು ಘೋಷಿಸುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

 

Share This Article
Leave a Comment

Leave a Reply

Your email address will not be published. Required fields are marked *