ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಪಟ್ಟಕ್ಕೇರಿದ ಸೀಕ್ರೆಟ್ ರಿವೀಲ್ ಮಾಡಿದ ಹಿಟ್‍ಮ್ಯಾನ್

Public TV
2 Min Read

ಮುಂಬೈ: ಐಪಿಎಲ್‍ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಇದುವರೆಗೂ 4 ಬಾರಿ ಚಾಂಪಿಯನ್ ಆಗಿದೆ. ರೋಹಿತ್ ಶರ್ಮಾ ಮುಂಬೈ ತಂಡದ ಕ್ಯಾಪ್ಟನ್ ಆಗುವ ಮುನ್ನ ಐದು ವರ್ಷ ಮುಂಬೈ ಇಂಡಿಯನ್ಸ್ ತಂಡವನ್ನು ಐವರು ಆಟಗಾರರು ಮುನ್ನಡೆಸಿದ್ದರು. 2008ರಲ್ಲಿ ಆರಂಭವಾದ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಸಚಿನ್ ತೆಂಡೂಲ್ಕರ್ ಅವರು ಮುಂಬೈ ತಂಡವನ್ನು ಮುನ್ನಡೆಸಿದ್ದರು. ಆ ಬಳಿಕ ಹರ್ಭಜನ್ ಸಿಂಗ್, ಶಾನ್ ಪೊಲಾಕ್, ಬ್ರಾವೋ, ರಿಕಿ ಪಾಂಟಿಂಗ್ ತಂಡದ ನಾಯಕತ್ವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ರೋಹಿತ್ ಶರ್ಮಾ ಕೂಡ ಐಪಿಎಲ್ ಆರಂಭದ ಆವೃತ್ತಿಯಿಂದಲೂ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿಲ್ಲ. 2010ರ ವರೆಗೂ ಡೆಕ್ಕನ್ ಚಾರ್ಜರ್ಸ್ ತಂಡದ ಪರ ರೋಹಿತ್ ಶರ್ಮಾ ಆಡಿದ್ದರು. 2011ರಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾರನ್ನು ಖರೀದಿ ಮಾಡಿತ್ತು. ಆ ಬಳಿಕ 2013ರಲ್ಲಿ ಯಾರು ಊಹೆ ಮಾಡದ ರೀತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಗೆ ವಹಿಸಲಾಗಿತ್ತು. ಆ ವರ್ಷ ಪಾಂಟಿಂಗ್ ನಾಯಕತ್ವದಿಂದ ದೂರ ಸರಿದ ಹಿನ್ನೆಲೆ ತಂಡದ ನಾಯಕತ್ವ ಯಾರಿಗೆ ಎಂಬ ಪ್ರಶ್ನೆ ಎದುರಾಗಿತ್ತು. ಆ ವೇಳೆ ಟೀಂ ಇಂಡಿಯಾ ಮತ್ತೊಬ್ಬ ಆಟಗಾರ ದಿನೇಶ್ ಕಾರ್ತಿಕ್ ನಾಯಕತ್ವದ ರೇಸ್‍ನಲ್ಲಿ ಮುಂದಿದ್ದರು. ಆದರೆ ಅಂತಿಮ ಕ್ಷಣದಲ್ಲಿ ರೋಹಿತ್‍ಗೆ ನಾಯಕತ್ವ ವಹಿಸಲಾಗಿತ್ತು. ಆ ವರ್ಷ ತಂಡಕ್ಕೆ ಟೈಟಲ್ ಗೆದ್ದು ತಂದಿದ್ದ ರೋಹಿತ್, ಆ ಬಳಿಕ 2015, 2017, 2019ರಲ್ಲೂ ತಂಡವನ್ನು ಚಾಂಪಿಯನ್ ಸ್ಥಾನದಲ್ಲಿ ತಂದು ನಿಲ್ಲಿಸಿದ್ದರು.

ಈ ಕುರಿತಂತೆ ಟೀಂ ಇಂಡಿಯಾ ಅನುಭವಿ ವೇಗಿ ಅಶ್ವಿನ್‍ರೊಂದಿಗೆ ಲೈವ್ ಇನ್‍ಸ್ಟಾ ಸೆಷನ್‍ನಲ್ಲಿ ರೋಹಿತ್ ಶರ್ಮಾ ಮಾತನಾಡಿದ್ದು, ನಾಯಕತ್ವ ಲಭಿಸಿದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಮುಂಬೈ ತಂಡಕ್ಕೆ ನಾನು ಬಂದ ಮೊದಲ ದಿನವೇ ತಂಡದ ನಾಯಕತ್ವ ಲಭಿಸುತ್ತದೆ ಎಂದು ಅಂದುಕೊಂಡಿದ್ದೆ. ಆದರೆ 2013ರಲ್ಲಿ ಪಾಂಟಿಂಗ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದ ಸಂದರ್ಭದಲ್ಲಿ ಅವರೊಂದಿಗೆ ನಾಯಕತ್ವ ರೇಸ್‍ನಲ್ಲಿ ನಿಲ್ಲುವುದು ಕಷ್ಟ ಎನಿಸಿತ್ತು. ಆದರೆ ಪಾಂಟಿಂಗ್ ನಾಯಕತ್ವ ಬೇಡ ಎಂದ ಪರಿಣಾಮ ಮೊದಲು ದಿನೇಶ್ ಕಾರ್ತಿಕ್ ಹೆಸರು ಕೇಳಿ ಬಂದಿತ್ತು. ಆದರೆ ಪಾಂಟಿಂಗ್ ನನ್ನ ಹೆಸರನ್ನು ಸೂಚಿಸಿ ತಂಡವನ್ನು ಮುನ್ನಡೆಸುವಂತೆ ಹೇಳಿದ್ದರು. ಪರಿಣಾಮ ನನಗೆ ನಾಯಕತ್ವ ಲಭಿಸಿತ್ತು ಎಂದು ರೋಹಿತ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *