ಮುಂದುವರಿದ ‘ಸಂಪುಟ’ ಸಸ್ಪೆನ್ಸ್ – ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆ

Public TV
3 Min Read

– ಅರುಣ್ ಸಿಂಗ್ ಮೂಲಕ ಬಂದ ಹೈಕಮಾಂಡ್ ಸಂದೇಶ ಏನು?
– ಸಂಪುಟ ಸರ್ಜರಿಗೆ ಬ್ರೇಕ್ ಹಾಕಿದ್ಯಾಕೆ ಹೈಕಮಾಂಡ್?

ಬೆಂಗಳೂರು: ಬಿಜೆಪಿ ಮನೆಯ ಸಚಿವಾಕಾಂಕ್ಷಿ ಹಕ್ಕಿಗಳಿಗೆ ಇವತ್ತು ಬೆಳಗ್ಗೆ ಇದ್ದ ನಿರೀಕ್ಷೆ, ಕಾತರ ಸಂಜೆ ಹೊತ್ತಿಗೆ ಇಳಿದಿತ್ತು. ಬೆಂಗಳೂರಿಗೆ ಆಗಮಿಸಿದ್ದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜತೆ ಸಿಎಂ ಯಡಿಯೂರಪ್ಪ ಚರ್ಚಿಸಿ ನಮ್ಮನ್ನ ನಾಳೆ ಬೆಳಗ್ಗೆಯೊಳಗೆ ಸಚಿವರಾಗಿ ಮಾಡೇಬಿಡ್ತಾರೆಂಬ ನಿರೀಕ್ಷೆ ಠುಸ್ ಆಗಿದೆ. ಕಾವೇರಿ ನಿವಾಸದಲ್ಲಿ ಮಧ್ಯಾಹ್ನ ಸಿಎಂ ಮತ್ತು ಅರುಣ್ ಸಿಂಗ್ ನಡುವಿನ ಸಂಪುಟ ವಿಸ್ತರಣೆ ಕುರಿತ ಮಾತುಕತೆ ವಿಫಲವಾಗಿದೆ. ಹೈಕಮಾಂಡ್ ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೊಡದೇ ತನ್ನ ಎಂದಿನ ಧೋರಣೆ ಪ್ರದರ್ಶಿಸಿದೆ ಎಂದು ತಿಳಿದು ಬಂದಿದೆ.

ಕಾವೇರಿ ನಿವಾಸದಲ್ಲಿ ಅರುಣ್ ಸಿಂಗ್ ಜೊತೆ ಸಿಎಂ ಯಡಿಯೂರಪ್ಪ ಇಪ್ಪತ್ತು ನಿಮಿಷ ಕಾಲ ಮಾತುಕತೆ ನಡೆಸಿದರು. ಸಂಪುಟಕ್ಕೆ ಮೂವರು ವಲಸಿಗರ ಸೇರ್ಪಡೆಯ ಅನಿವಾರ್ಯತೆ ಬಗ್ಗೆ ಸಿಎಂ ಮನವರಿಕೆ ಮಾಡಿದ್ದರು. ವಲಸಿಗರ ಸೇರ್ಪಡೆಯಿಂದ ಮೂಲ ಬಿಜೆಪಿಗರಿಂದ ಅಸಮಧಾನ ಸೃಷ್ಟಿಯಾಗದಂತೆ ನೋಡಿಕೊಳ್ಳುವುದಾಗಿ ಸಿಎಂ ಭರವಸೆ ಕೊಟ್ಟಿದ್ದರು ಎನ್ನಲಾಗಿದೆ. ಸಿಎಂ ಅವರ ಮಾತುಗಳನ್ನ ಶಾಂತಿಯಿಂದ ಕೇಳಿಸಿಕೊಂಡ ಅರುಣ್ ಸಿಂಗ್ ಹೈಕಮಾಂಡ್ ಸದ್ಯಕ್ಕೆ ಈ ವಿಚಾರದಲ್ಲಿ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳುವುದು ಅನುಮಾನ. ನಿಮ್ಮ ಭಾವನೆಗಳನ್ನು ವರಿಷ್ಠರ ಗಮನಕ್ಕೆ ತರೋದಾಗಿ ಹೇಳಿ ಅರುಣ್ ಸಿಂಗ್ ಕಾವೇರಿಯಿಂದ ನಿರ್ಗಮಿಸಿದರು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಸಂಪುಟ ಸರ್ಜರಿಗೆ ಬ್ರೇಕ್ ಹಾಕಿದ್ಯಾಕೆ?: ಅರುಣ್ ಸಿಂಗ್ ಮೂಲಕ ಒಪ್ಪಿಗೆ ಕೊಡೋ ಅನಿವಾರ್ಯತೆ ಹೈಕಮಾಂಡ್ ಗೆ ಇರಲಿಲ್ಲ. ಅರುಣ್ ಸಿಂಗ್ ಪಕ್ಷ ಮತ್ತು ಸರ್ಕಾರದೊಳಗಿನ ಮಾಹಿತಿ ಸಂಗ್ರಹಿಸಲು ರಾಜ್ಯಕ್ಕೆ ಆಗಮಿಸಿದ್ದರು. ಈಗಾಗಲೇ ಇರುವ ಗೊಂದಲಗಳನ್ನು ಮೊದಲು ಬಗೆಹರಿಸೋಣವೆಂಬ ಉದ್ದೇಶದಿಂದ ಸರ್ಜರಿ ದಿನಾಂಕ ಮುಂದೂಡಿರುವ ಸಾಧ್ಯತೆಗಳಿವೆ.

ರಾಜ್ಯ ಬಿಜೆಪಿಯೊಳಗಿನ ಪರಿಸ್ಥಿತಿ ಸರಿಹೋಗಲೆಂಬ ಲೆಕ್ಕಕ್ಕೆ ಹೈಕಮಾಂಡ್ ಬದ್ಧವಾಗಿದ್ದರಿಂದ ಸಂಪುಟ ವಿಸ್ತರಣೆಗೆ ಇನ್ನೂ ಗ್ರೀನ್ ಸಿಕ್ಕಿಲ್ಲ ಎನ್ನಲಾಗ್ತಿದೆ. ಹೈಕಮಾಂಡ್ ಸರ್ಕಾರದಲ್ಲಿ ಮಹತ್ವದ ಬದಲಾವಣೆ ಮಾಡಬೇಕೆಂಬ ಲೆಕ್ಕಾಚಾರಗಳಿದ್ದು, ಗ್ರಾಮ ಪಂಚಾಯ್ತಿ ಚುನಾವಣೆ, ಉಪಚುನಾವಣೆಗಳು ಮುಗಿಯಲಿ ಎಂಬ ಆಲೋಚನೆ ಇರಬಹುದು. ವಿಸ್ತರಣೆ ಬದಲು ಪುನಾರಚನೆಯ ಉದ್ದೇಶ. ಇದಕ್ಕೆ ಸಮಯದ ಅಗತ್ಯ ಇದೆ ಅನ್ನೋದು ದೆಹಲಿ ನಾಯಕರ ಅಭಿಪ್ರಾಯ ಆಗಿರಬಹುದು. ಯಡಿಯೂರಪ್ಪ ವಿಚಾರದಲ್ಲಿ ಹೈಕಮಾಂಡ್ ಗೆ ಇನ್ನೂ ಇರುವ ಅತೃಪ್ತಿ ಸಹ ಎನ್ನಲಾಗಿದೆ.

ಸಿಎಂ ಬಿಎಸ್‍ವೈ ಬೇಸರ: ಕಳೆದ ಮೂರು ದಿನಗಳಿಂದಲೂ ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆ ಅಧಿವೇಶನಕ್ಕೂ ಮುನ್ನ ಮುಗಿಸಲು ಸಾಕಷ್ಟು ಕಸರತ್ತು ನಡೆಸಿದ್ದರು. ಬೆಳಗಾವಿಯಲ್ಲೂ ಅರುಣ್ ಸಿಂಗ್ ಜತೆ ಚರ್ಚೆ ನಡೆಸಿ ಮೂವರ ಹೆಸರಿನ ಪಟ್ಟಿ ನೀಡಿ ವಿಸ್ತರಣೆಯ ಅನಿವಾರ್ಯತೆ ಬಗ್ಗೆ ವಿವರಣೆ ಕೊಟ್ಟಿದ್ರು. ಬೆಂಗಳೂರಿನ ಭೇಟಿ ವೇಳೆ ವರಿಷ್ಠರ ಸಂದೇಶ ತಲುಪಿಸುವುದಾಗಿ ಅರುಣ್ ಸಿಂಗ್ ಭರವಸೆ ಕೊಟ್ಟಿದ್ದರು ಎನ್ನಲಾಗಿದೆ. ಆದರೆ ಅರುಣ್ ಸಿಂಗ್ ಬೆಂಗಳೂರಿಗೆ ಬಂದ್ರೂ ಏನೂ ಪ್ರಯೋಜನ ಆಗ್ಲಿಲ್ಲ. ಹೀಗಾಗಿ ಸಿಎಂ ಯಡಿಯೂರಪ್ಪಗೂ ಬೇಸರವಾಗಿದ್ದು, ಅವರು ಈಗ ವಿಸ್ತರಣೆ ವಿಚಾರ ಬದಿಗೊತ್ತಿ ಅಧಿವೇಶನ, ಗ್ರಾ.ಪಂ. ಚುನಾವಣೆಯತ್ತ ಗಮನ ಕೊಡುವಂತಾಗಿದೆ.

ನಿರಾಸೆಯ ಕಾರ್ಮೋಡ: ಈ ಮಧ್ಯೆ ಶಾಸಕ ಮುನಿರತ್ನ, ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಇವತ್ತು ಮಧ್ಯಾಹ್ನ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಕಾವೇರಿ ನಿವಾಸಕ್ಕೆ ಅರುಣ್‍ಸಿಂಗ್ ಭೇಟಿಗೂ ಮುನ್ನ ಈ ಮೂವರೂ ಸಿಎಂ ಭೇಟಿ ಮಾಡಿ, ವಿಸ್ತರಣೆಗೆ ಮತ್ತೆ ಒತ್ತಾಯ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಗದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಲ್ಲಿ ಮತ್ತೆ ನಿರಾಸೆಯ ಕಾರ್ಮೋಡ ಕವಿದಿದೆ. ಮತ್ತೊಂದು ಅವಕಾಶಕ್ಕಾಗಿ ಆಕಾಂಕ್ಷಿಗಳು ಎದುರು ನೋಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *