ಮುಂದಿನ ದಿನದಲ್ಲಿ ಕೆಂಪು ಕೋಟೆಯಲ್ಲಿ ನಾವು ಭಾಷಣ ಮಾಡ್ತೇವೆ: ಡಿಕೆಶಿ

Public TV
2 Min Read

ಬೆಂಗಳೂರು: ಮುಂದಿನ ದಿನದಲ್ಲಿ ಕೆಂಪು ಕೋಟೆಯಲ್ಲಿ ನಾವು ಭಾಷಣ ಮಾಡುತ್ತೇವೆ. ನಮ್ಮ ಪಕ್ಷವೇ ಅಧಿಕಾರ ಹಿಡಿಯಲಿದೆ. ಅದಕ್ಕೆ ನಾವು ಇಲ್ಲಿಂದಲೇ ಧ್ವನಿ ನೀಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಇಂದು 74 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿತ್ತು. ಕಾಂಗ್ರೆಸ್ ಭವನದಲ್ಲಿ ಪಕ್ಷದ ವತಿಯಿಂದ 200 ಅಡಿ ಉದ್ದದ ರಾಷ್ಟ್ರಧ್ವಜ ಪ್ರದರ್ಶನ ಮಾಡುವ ಮೂಲಕ ಆಚರಿಸಲಾಯಿತು.

ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಿಕೆಶಿ, ಇಂದು ಸಂವಿಧಾನದ ಅಪಚಾರ ಹೆಚ್ಚಾಗುತ್ತಿದೆ. ಅಂಬೇಡ್ಕರ್ ಬಗ್ಗೆ ಬಿಜೆಪಿಯವರಿಗೆ ಕಿಂಚಿತ್ತೂ ಗೌರವ ಇಲ್ಲ. ಅಂಬೇಡ್ಕರ್ ಸಂವಿಧಾನ ಬದಲಿಸಲು ಬಿಜೆಪಿ ಮುಂದಾಗಿದೆ. ದೇಶ ತುಂಡು ತುಂಡು ಮಾಡುವ ಸಂಚು ನಡೆಯುತ್ತಿದೆ. ಕೋಮುವಾದದ ವಿಷ ಬೀಜ ಬಿತ್ತಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ನಮಗೆ ಮತಾಂತರ, ಕೋಮುದ್ವೇಷಗಳಿಂದ ಸ್ವಾತಂತ್ರ್ಯ ಬೇಕಾಗಿದೆ. ಇಂದು ಸಂವಿಧಾನಕ್ಕೆ ಅಪಚಾರವಾಗುತ್ತಿದೆ. ಸಂವಿಧಾನ ಅಳಿಸುವ ಮೇಲಾಟ ನಡೆದಿದೆ. ಸಂವಿಧಾನದ ಮೇಲೆ ಬಿಜೆಪಿಯವರಿಗೆ ಕನಿಷ್ಠ ಬೆಲೆಯಿಲ್ಲ. ಸಂವಿಧಾನ ಸುಡಲು ಹೊರಟವರು ಅವರು. ಕೋಮುವಾದಿಗಳಿಂದ ಸ್ವಾತಂತ್ರ್ಯ ಪಡೆಯಬೇಕಿದೆ. ಕೋಮುವಾದ, ದ್ವೇಷ ಬೀಜ ಬಿತ್ತುತ್ತಿದ್ದಾರೆ. ಇಂತ ವಾತಾವರಣವನ್ನ ಬಿಜೆಪಿ ಸೃಷ್ಟಿಸುತ್ತಿದೆ. ಈ ವಿಷ ಬೀಜವನ್ನ ನಾವು ಕಿತ್ತು ಹಾಕಬೇಕಿದೆ ಎಂದರು.

ನಾವು ಹೋರಾಟದ ಮೂಲಕವೇ ಸ್ವಾತಂತ್ರ್ಯ ಪಡೆಯಬೇಕಿದೆ. ದೇಶದಲ್ಲಿನ ತಿಕ್ಕಾಟವನ್ನ ತೊಡೆಯಬೇಕಿದೆ. ರಾಷ್ಟ್ರದಲ್ಲಿ ಮತ್ತೊಂದು ಬದಲಾವಣೆ ತರಬೇಕಿದೆ. ಮುಂದಿನ ದಿನದಲ್ಲಿ ಕೆಂಪುಕೋಟೆಯಲ್ಲಿ ನಾವು ಭಾಷಣ ಮಾಡ್ತೇವೆ. ನಮ್ಮ ಪಕ್ಷವೇ ಅಧಿಕಾರ ಹಿಡಿಯಲಿದೆ. ಅದಕ್ಕೆ ನಾವು ಇಲ್ಲಿಂದಲೇ ಧ್ವನಿ ನೀಡಬೇಕಿದೆ. ಯುವಜನತೆಯ ಮೂಲಕ ಹೋರಾಟ ಮಾಡಬೇಕಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಕರೆ ನೀಡಿದರು.

ಗಾಂಧಿಯವರ ತತ್ವಗಳನ್ನ ನಾವು ಅನುಸರಿಸಬೇಕು. ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟವರನ್ನ ಸ್ಮರಿಸಿಕೊಳ್ಳಬೇಕು. ಅಸಮಾನತೆ ನಿವಾರಿಸಿ ಸಮಾನತೆ ಸಾಧಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನ ಎತ್ತಿಹಿಡಿಯಬೇಕು. ಕಾಂಗ್ರೆಸ್ ಜನ್ಮತಾಳಿದ್ದೇ ಸ್ವಾತಂತ್ರ್ಯಕ್ಕಾಗಿ. ದೇಶದ ಐಕ್ಯತೆಯನ್ನ ನಾವು ಇಂದು ಉಳಿಸಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಂಎಲ್‍ಸಿ ಬಿ.ಕೆ ಹರಿಪ್ರಸಾದ್, ನಾರಾಯಣ ಸ್ವಾಮಿ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *