ಮುಂಗಾರಿನ ಅಬ್ಬರಕ್ಕೆ ಕೊಡಗು ತತ್ತರ – ಗಾಳಿ ಮಳೆಗೆ ವಿದ್ಯುತ್, ರಸ್ತೆ ಸಂಪರ್ಕ ಕಡಿತ

Public TV
2 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರಿನ ಅಬ್ಬರ ಮತ್ತಷ್ಟು ಹೆಚ್ಚಿದೆ. ಕಳೆದ ರಾತ್ರಿಯಿಂದ ಜಿಲ್ಲಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದ್ದು, ಕೊಡಗಿನ ವಿವಿಧೆಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಹಾಗೂ ರಸ್ತೆ ಅಡಚಣೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಮಳೆಯ ಅರ್ಭಟ ನಾಲ್ಕು ಐದು ದಿನಗಳಿಂದ ಹೆಚ್ಚಾಗುತ್ತಿದೆ. ಇದರಿಂದಾಗಿ ಗುಡ್ಡಗಾಡಿನ ಜನರು ಹಾಗೂ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ. ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬಲುಮುರಿಯಲ್ಲಿ ಪಾರಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಬಲುಮರಿ ಸೇತುವೆ ಮೇಲೆ 9 ಅಡಿಯಷ್ಟು ನೀರು ಹರಿಯುತ್ತಿದೆ. ಇದರಿಂದಾಗಿ ಪಾರಾಣೆ, ಕೂಡು ಪರಂಬು ಮತ್ತು ನಾಲ್ಕು ಮೈಲ್ ಗ್ರಾಮಗಳಿಗೆ ಸಂಚಾರಕ್ಕೆ ಅಡ್ಡಿಯಾಗಿದೆ. ಅಷ್ಟು ಗ್ರಾಮದಲ್ಲಿರುವ 60ಕ್ಕೂ ಹೆಚ್ಚು ಕುಟುಂಬಗಳಿಗೆ ಇದೀಗ ಸೇತುವೆ ಸಂಪರ್ಕ ಇಲ್ಲದೆ ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ ಮೇಲ್ಸೇತುವೆ ಬಳಸಿಕೊಂಡು ಸುಮಾರು 7 ಕಿಲೋಮೀಟರ್ ಸುತ್ತಿ ಬಳಸಿ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿಯಲ್ಲಿ ಮಳೆ ಎರಡು ಮೂರು ದಿನ ಮುಂದುವರಿದರೆ ಬಲುಮುರಿ ಗ್ರಾಮದ ಜನರಿಗೂ ಪ್ರವಾಹದ ಭೀತಿ ಎದುರಾಗಲಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಮಳೆಯ ಅರ್ಭಟ ಮುಂದುವರಿದಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಅಲ್ಲದೇ ವಿರಾಜಪೇಟೆ ತಾಲೂಕಿನ ಬೇತ್ರಿ ಸೇತುವೆ ಬಳಿಯು ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಅಲ್ಲದೇ ಮಂಜಿನ ನಗರಿ ಮಡಿಕೇರಿಯಲ್ಲೂ ಮಧ್ಯಾಹ್ನದ ಬಳಿಕ ಮಳೆ ತೀವ್ರಗೊಂಡಿದೆ. ಮಡಿಕೇರಿಯ ಸುತ್ತಮುತ್ತ ಧಾರಕಾರ ಮಳೆಯಾಗುತ್ತಿದ್ದು, ಭಾರೀ ಮಳೆಗೆ ಮಡಿಕೇರಿ ನಗರ ಮನೆ-ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.

ನಗರದ ಕೈಗಾರಿಕಾ ಬಡಾವಣೆ ಕುಮಾರ್ ಎಂಬವರ ಮನೆಗೆ ಕಾಲುವೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿ ಇದ್ದ ಹಲವು ವಸ್ತುಗಳು ನೀರು ಪಾಲಾಗಿದೆ. ಮತ್ತೊಂದು ಮೊಬೈಲ್ ಶಾಪ್ ಗೂ ನೀರು ನುಗ್ಗಿರುವುದರಿಂದ ರವೂಫ್ ಎಂಬವರ ಅಂಗಡಿಯಲ್ಲಿ ಇದ್ದ ಸಾವಿರಾರು ರೂಪಾಯಿ ಮೌಲ್ಯದ ಮೊಬೈಲ್ ಬಿಡಿ ಭಾಗಗಳು ನೀರು ಪಾಲಾಗಿದೆ. ಘಟನ ಸ್ಥಳಕ್ಕೆ ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್. ವಾಡ್9ನ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ನಾಲ್ಕು ಐದು ದಿನದ ಮಳೆಗೆ ಇಲ್ಲಿಲ್ಲದ ಅವಾಂತರಗಳು ಸೃಷ್ಟಿಯಾಗಿದ್ದು, ಗ್ರಾಮೀಣ ಭಾಗದ ಜನರು ಕತ್ತಲೆಯಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ:ಮಲೆನಾಡಲ್ಲಿ ಭಾರೀ ಗಾಳಿ, ಮಳೆ – ಚಾರ್ಮಾಡಿಯಲ್ಲಿ ಧರೆಗುರುಳಿದ ಮರ

Share This Article
Leave a Comment

Leave a Reply

Your email address will not be published. Required fields are marked *