ಮಿಡತೆ ತಿಂದರೆ ಕೊರೊನಾ ಗುಣವಾಗುತ್ತೆ: ಪಾಕ್ ಸಂಸದ

Public TV
1 Min Read

– ಮಿಡತೆ ತಿಂದ್ರೆ ಪಾಕ್‍ಗೆ 2 ಉಪಯೋಗವಿದೆ

ಇಸ್ಲಾಮಾಬಾದ್: ಮಿಡತೆ ತಿಂದರೆ ಕೊರೊನಾ ಗುಣವಾಗುತ್ತೆ ಎಂದು ಪಾಕಿಸ್ತಾನದ ಸಂಸದರೊಬ್ಬರು ಹೇಳಿಕೆ ನೀಡಿರುವುದು ಈಗ ಬಹಳ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ಕೊರೊನಾ ಲಾಕ್‍ಡೌನ್ ವೇಳೆ ಅಲ್ಕೋಹಾಲ್ ಸೇವನೆ ಮಾಡಿದರೆ ಕೊರೊನಾ ವಾಸಿಯಾಗುತ್ತದೆ ಎಂಬ ವದಂತಿ ಹರಡಿತ್ತು. ಈಗ ಪಾಕಿಸ್ತಾನ ಸಂಸದ ರಿಯಾಜ್ ಫತ್ಯಾನ, ಮಿಡತೆ ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಕೊರೊನಾ ವೈರಸ್ ಅನ್ನು ತಡೆಗಟ್ಟಬಹುದು ಎಂದು ಹೇಳಿದ್ದಾರೆ.

ಈ ವಿಚಾರವನ್ನು ಸಂಸತ್ತಿನ ಕಲಾಪದ ವೇಳೆ ಪ್ರಸ್ತಾಪ ಮಾಡಿರುವ ರಿಯಾಜ್, ಮಿಡತೆಯನ್ನು ತಿನ್ನುವುದರಿಂದ ಮಾನವನ ದೇಹದಲ್ಲಿ ರೋಗನಿರೋಧಕ ಶಕ್ತಿ ನೀಡಬಲ್ಲ ಪ್ರತಿಕಾಯಗಳು ಸೃಷ್ಟಿಯಾಗುತ್ತವೆ. ಆ ಸಮಯದಲ್ಲಿ ಮನುಷ್ಯನ ದೇಹದಲ್ಲಿ ಶಕ್ತಿ ಜಾಸ್ತಿಯಾಗುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಗೆ ಇದ್ದರೆ, ಕೊರೊನಾ ಸೋಂಕು ನಮಗೆ ಬರುವುದಿಲ್ಲ ಎಂದು ತನ್ನ ವಾದವನ್ನು ಮಂಡಿಸಿದ್ದಾರೆ.

ಇದರ ಜೊತೆಗೆ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್‍ಗೆ ಸಲಹೆಯೊಂದನ್ನು ನೀಡಿರುವ ರಿಯಾಜ್ ಫತ್ಯಾನ, ಮಿಡತೆ ವಿಚಾರವನ್ನು ಗಂಭೀರವಾಗಿ ತಗೆದುಕೊಂಡು ಇದರ ಬಗ್ಗೆ ಸಂಶೋಧನೆ ಮಾಡಬೇಕು ಎಂದು ಹೇಳಿದ್ದಾರೆ. ಜೊತೆಗೆ ಮಿಡತೆ ತಿನ್ನುವುದರಿಂದ ಪಾಕಿಸ್ತಾನಕ್ಕೆ ಎರಡು ಲಾಭವಿದ್ದು, ಒಂದು ಕೊರೊನಾ ವಿರುದ್ಧ ಹೋರಾಟ ನಡೆಸಬಹುದು. ಎರಡನೇಯದು ಪ್ರತಿ ವರ್ಷ ಮಿಡತೆ ದಾಳಿ ನಮಗೆ ತೊಂದರೆ ಕೊಡುತ್ತಿದೆ. ಇದಕ್ಕೂ ಪರಿಹಾರ ಸಿಗುತ್ತದೆ ಎಂದು ತಿಳಿಸಿದ್ದಾರೆ.

ಸಂಸತ್ತಿನಲ್ಲಿ ನಿಂತು ಮಿಡತೆ ತಿನ್ನುವ ವಾದವನ್ನು ಮಂಡಿಸಿರುವ ಸಂಸದ ಫತ್ಯಾನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಭಾರತದಲ್ಲಿ ಬಹಳ ಟ್ರೋಲ್ ಆಗುತ್ತಿದೆ. ಕೆಲವರು ಕಮೆಂಟ್ ಕೂಡ ಮಾಡುತ್ತಿದ್ದು, ಪಾಕಿಸ್ತಾನದ ಮತ್ತೊರ್ವ ಸಂಸದ ಮಿಡತೆಯನ್ನು ನಮ್ಮ ರಾಷ್ಟ್ರ ಆಹಾರವಾಗಿ ಘೋಷಿಸುವುದನ್ನು ಕಾಯುತ್ತಿದ್ದೇವೆ ಎಂದು ಫನ್ನಿಯಾಗಿ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *