ಮಾಯದಂಥ ಮಳೆ ಬಂದು ಮದಗಾದ ಕೆರೆ ಬಳಿ ಜಲಪಾತ ಉದ್ಭವ

Public TV
1 Min Read

– ಹಸಿರ ಹೊದ್ದ ಬೆಟ್ಟ, ಗುಡ್ಡಗಳ ಮಧ್ಯೆ ಜಲಧಾರೆ
– ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ ಜನ

ಹಾವೇರಿ: ಸುತ್ತ ಹಸಿರ ರಾಶಿ, ಗುಡ್ಡ ಬೆಟ್ಟಗಳ ಸಾಲು, ಹಸಿರು ಬೆಟ್ಟದ ನಡುವೆ ಧುಮ್ಮಿಕ್ಕಿ ಹರಿಯೋ ಜಲಧಾರೆ. ಆ ಸೌಂದರ್ಯವನ್ನ ಕಣ್ತುಂಬಿಕೊಳ್ಳೋದೆ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದ. ಇಲ್ಲಿನ ಸೌಂದರ್ಯಕ್ಕೆ ಮನಸೋತ ಜನ, ಧುಮ್ಮಿಕ್ಕುವ ಜಲಪಾತ ನೋಡಲು ಸಾಲುಗಟ್ಟಿ ಆಗಮಿಸುತ್ತಿದ್ದಾರೆ.

ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಕೆರೆಯ ಬಳಿ ಜಲಪಾತ ಉಂಟಾಗಿದ್ದು, ಕಣ್ತುಂಬಿಕೊಳ್ಳಲು ಸಚಿವರು ಸೇರಿದಂತೆ ಜನರು ಮುಗಿಬೀಳುತ್ತಿದ್ದಾರೆ. ಮದಗಮಾಸೂರು ಕೆರೆ ಐತಿಹಾಸಿಕವಾಗಿ ಸಾಕಷ್ಟು ಮಹತ್ವ ಪಡೆದಿದೆ. ಕೆರೆಯ ಕುರಿತು ಜಾನಪದೀಯರು ಮಾಯದಂಥಾ ಮಳೆ ಬಂತಣ್ಣ, ಮದಗದ ಕೆರೆಗೆ ಎಂದು ಹಾಡು ಕಟ್ಟಿದ್ದಾರೆ. ಅಂಥ ಮದಗಮಾಸೂರು ಕೆರೆಗೆ ಈಗ ಮಾಯದಂಥಾ ಮಳೆ ಬಂದಿದೆ. ಮಳೆಯ ಪರಿಣಾಮ ಕೆರೆ ಭರಪೂರ ತುಂಬಿಕೊಂಡಿದೆ.

ಸಾವಿರಾರು ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರೋ ಮದಗಮಾಸೂರು ಕೆರೆ ತುಂಬಿ, ಕೆರೆಗೆ ಕೋಡಿ ಬಿದ್ದು ನೀರು ಹರಿತಿದೆ. ಬೆಟ್ಟ ಗುಡ್ಡಗಳ ಸಾಲಿನ ನಡುವೆ ಹರಿತಿರೋ ಜಲಧಾರೆ ನೋಡಲು ಎರಡು ಕಣ್ಣುಗಳು ಸಾಲದು. ಕೆರೆಯ ನೀರು ಹಸಿರಿನಿಂದ ಕಂಗೊಳಿಸೋ ಬೆಟ್ಟಗಳ ಸಾಲಿನ ನಡುವೆ ಧುಮ್ಮಿಕ್ಕಿ ಹರಿತಿದೆ. ಈ ಭಾಗದಲ್ಲಿ ಮದಗಮಾಸೂರು ಫಾಲ್ಸ್ ಮಿನಿ ಜೋಗ ಪಾಲ್ಸ್ ಎಂದೇ ಫೇಮಸ್ ಆಗಿದೆ. ಕೊರೊನಾ ಭೀತಿ ಇರುವುದರಿಂದ ಅಷ್ಟೊಂದು ಪ್ರಮಾಣದಲ್ಲಿ ಜನರ ದಂಡು ಆಗಮಿಸುತ್ತಿಲ್ಲ. ಆದರೂ ಕೆಲವರು ಮಾತ್ರ ಸ್ನೇಹಿತರ ಜೊತೆ, ಕುಟುಂಬದ ಜೊತೆಗೂಡಿ ಬಂದು ಇಲ್ಲಿನ ಹಸಿರ ಸೌಂದರ್ಯ, ಜಲಧಾರೆಯನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.

ಇಲ್ಲಿನ ಜಲಧಾರೆ, ಹಸಿರ ಸೌಂದರ್ಯಕ್ಕೆ ಮನಸೋತು ಹಲವರು ಫೋಟೋ ಶೂಟ್ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಕೆಲವರು ಕುಟುಂಬ ಸಮೇತ, ಕೆಲವರು ಸ್ನೇಹಿತರೊಂದಿಗೆ ಇಲ್ಲಿಗೆ ಬಂದು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮಳೆಗಾಲದ ಇಲ್ಲಿನ ಸೌಂದರ್ಯಕ್ಕೆ ಫುಲ್ ಫಿದಾ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *