ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ- ಸಿಎಂ

Public TV
2 Min Read

– ಅಮಾನವೀಯ ರೀತಿಯಲ್ಲಿ ಶವ ಸಂಸ್ಕಾರ ಪ್ರಕರಣ
– ಸಿಎಂ ಯಡಿಯೂರಪ್ಪ ತೀವ್ರ ಬೇಸರ

ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟವರ ದೇಹವನ್ನು ಅಮಾನವೀಯವಾಗಿ ಗುಂಡಿಗೆ ಎಸೆದು ಅಂತ್ಯಸಂಸ್ಕಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಈ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಕೊರೊನಾ ವಿಚಾರದಲ್ಲಿ ಮಾನವೀಯತೆಯಿಂದ ನಡೆದುಕೊಳ್ಳೋಣ. ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ ಎಂಬುದನ್ನು ಅರಿಯೋಣ ಎಂದು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡುವ ಮೂಲಕ ಬೇಸರದಿಂದಲೇ ಸಿಎಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಸಿಬ್ಬಂದಿ ನಡವಳಿಕೆ ಅತ್ಯಂತ ಅಮಾನವೀಯ ಹಾಗೂ ತೀವ್ರ ನೋವಿನ ಸಂಗತಿ. ಕೊರೊನಾ ಸೋಂಕಿತರೊಂದಿಗೆ ಮಾನವೀಯತೆಯಿಂದ ವರ್ತಿಸಿ, ಸೋಂಕಿತರ ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸಿ ಎಂದು ಕೋವಿಡ್-19 ನಿರ್ವಹಣೆಗೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೆ ವಿನಂತಿಸಿದ್ದಾರೆ.

ಮಾನವೀಯತೆಯಿಂದ ನಡೆದುಕೊಳ್ಳೋಣ, ಮಾನವೀಯತೆಗಿಂತ ದೊಡ್ಡ ಧರ್ಮ ಯಾವುದೂ ಇಲ್ಲ ಎಂಬುದನ್ನು ಅರಿಯೋಣ ಎಂದು ಹೇಳುವ ಮೂಲಕ ಬೇಸರದಿಂದಲೇ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಒಂದೇ ದಿನ ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾಗೆ 9 ಜನ ಸಾವನ್ನಪ್ಪಿದ್ದರು. ಇವರ ಮೃತ ದೇಹವನ್ನು ಅಮಾನವೀಯವಾಗಿ ಬೇಕಾಬಿಟ್ಟಿಯಾಗಿ ಗುಂಡಿಗೆ ಎಸೆದು ಮಣ್ಣು ಮಾಡಲಾಗಿತ್ತು. ಈ ದೃಶ್ಯವನ್ನು ಕಂಡರೆ ಎಂಥವರಿಗೂ ಕರುಳು ಹಿಂಡುವಂತಿತ್ತು. ಒಂದೇ ಬಾರಿ ಶವ ಸಂಸ್ಕಾರ ಮಾಡಬೇಕಾದರೆ ಆರೋಗ್ಯ ಇಲಾಖೆಯ ಸಿಬ್ಬಂದಿ ಶವವನ್ನು ಮೇಲಿಂದ ಎಸೆದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವಿಡಿಯೋ ವೈರಲ್ ಆಗಿತ್ತು. ಅಲ್ಲದೆ ಆಕ್ರೋಶ ಸಹ ವ್ಯಕ್ತವಾಗಿತ್ತು.

ಪ್ರಕರಣದ ಕುರಿತು ತನಿಖೆ ನಡೆಸುವಂತೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶಿಸಿದ್ದು, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ನೇತೃತ್ವದಲ್ಲಿ ತನಿಖೆ ನಡೆಸುವಂತೆ ತಿಳಿಸಿದ್ದಾರೆ. ಎರಡು ದಿನಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ಅಮಾನವೀಯ ಘಟನೆ ಕುರಿತು ಬಳ್ಳಾರಿ ಜಿಲ್ಲಾಧಿಕಾರಿ ಸಹ ಬೇಸರ ವ್ಯಕ್ತಪಡಿಸಿ, ಬಹಿರಂಗವಾಗಿ ಕುಟುಂಬಸ್ಥರು ಹಾಗೂ ಸಾರ್ವಜನಿಕರ ಬಳಿ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಮಾರ್ಚುರಿ ಸ್ಟ್ಯಾಫ್ ಬದಲಾವಣೆ ಮಾಡಿ ಡಿಸಿ ಆದೇಶಿಸಿದ್ದಾರೆ. ಇನ್ನು ಮುಂದೆ ಶವಗಳ ನಿರ್ವಹಣೆಗೆ ವಿಧಿವಿಜ್ಞಾನ ಮತ್ತು ವಿಮ್ಸ್‍ನ ನುರಿತ ತಂಡ ನೇಮಕ ಮಾಡುವಂತೆ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *