ಮಾಧುಸ್ವಾಮಿ ಮತ್ತೆ ಎಡವಟ್ಟು – 6, 7ನೇ ತರಗತಿಗೆ ಆನ್‌ಲೈನ್‌ ಶಿಕ್ಷಣ ಇದೆ

Public TV
2 Min Read

ಬೆಂಗಳೂರು: ಸುದ್ದಿಗೋಷ್ಠಿ ವೇಳೆ ಮಾಧುಸ್ವಾಮಿ ಮತ್ತೆ ಎಡವಟ್ಟು ಮಾಡಿಕೊಂಡಿದ್ದು, ಈಗ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟನೆ ನೀಡಿ 6 ಮತ್ತು 7ನೇ ತರಗತಿಗೆ ಆನ್‌ಲೈನ್‌ ಶಿಕ್ಷಣ ರದ್ದು ಸಂಬಂಧ ಸರ್ಕಾರ ನಿರ್ಧಾರ ಪ್ರಕಟಿಸಿಲ್ಲ ಎಂದು ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಸುರೇಶ್‌ ಕುಮಾರ್‌, ಕರ್ನಾಟಕ ಸರ್ಕಾರ ಎಲ್‌ಕೆಜಿ, ಯುಕೆಜಿ, 1 ರಿಂದ 5ನೇ ತರಗತಿಯವರೆಗಿನ ಆನ್‌ಲೈನ್‌ ಶಿಕ್ಷಣವನ್ನು ರದ್ಧು ಮಾಡಿದೆ. 6 ಮತ್ತು 7ನೇ ತರಗತಿಯವರೆಗಿನ ಆನ್‌ಲೈನ್‌ ಶಿಕ್ಷಣವನ್ನು ರದ್ದು ಮಾಡಬೇಕು ಎಂದು ಕೆಲ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸರ್ಕಾರ ರದ್ದು ಪಡಿಸುವ ಯಾವುದೇ ನಿರ್ಧಾರ ಪ್ರಕಟಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಾಧುಸ್ವಾಮಿ ಹೇಳಿದ್ದು ಏನು?
ಇಂದು ಕ್ಯಾಬಿನೆಟ್‌ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ, ಸಂಪುಟದಲ್ಲಿ ಆನ್‌ಲೈನ್‌ ತರಗತಿಯ ಬಗ್ಗೆ ಚರ್ಚೆ ನಡೆಯಿತು. 7ನೇ ತರಗತಿಯವರೆಗಿನ ಆನ್‌ಲೈನ್‌ ಶಿಕ್ಷಣವನ್ನು ರದ್ದು ಮಾಡುವಂತೆ ಸಚಿವರು ಒತ್ತಾಯಿಸಿದರು. ಹೀಗಾಗಿ ಎಲ್ಲ ಮಾದರಿಯ ಪಠ್ಯ ಬೋಧಿಸುತ್ತಿರುವ ಶಾಲೆಗಳಲ್ಲಿ ನಡೆಯುತ್ತಿರುವ 7ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣವನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಸಚಿವ ಮಾಧುಸ್ವಾಮಿ ಎಡವಟ್ಟು, ಸರ್ಕಾರಕ್ಕೆ ಇಕ್ಕಟ್ಟು- ಸಿಎಂ ಸ್ಪಷ್ಟನೆ

ಸಾಕಷ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅನಾನುಕೂಲವಾಗುವ ಕಾರಣಕ್ಕೆ 6 ಮತ್ತು 7 ತರಗತಿಗಳಿಗೆ ಆನ್ ಲೈನ್ ಶಿಕ್ಷಣ ಬೇಡ ಎಂದು ಸಂಪುಟ ಒಮ್ಮತದ ತೀರ್ಮಾನ ಮಾಡಿತು. ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. 8ನೇ ತರಗತಿ ಹಾಗೂ 9ನೇ ತರಗತಿ ಆನ್ ಲೈನ್ ಕ್ಲಾಸ್ ನಡೆಯುತ್ತಿದೆ. ಇದನ್ನೂ ನಿಲ್ಲಿಸಬೇಕೇ ಅಥವಾ ಬೇಡವೇ ಎನ್ನುವುದರ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದರು.

‘ಪಬ್ಲಿಕ್ ಟಿವಿ’ ಕಳೆದ ಒಂದು ವಾರದಿಂದ ಆಲ್‍ಲೈನ್ ಕ್ಲಾಸ್ ಸಮಸ್ಯೆಯ ಕುರಿತು ವಿಸ್ತೃತ ವರದಿ ಮಾಡಿತ್ತು. ಪೋಷಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆನ್‌ಲೈನ್‌ ಕ್ಲಾಸ್‌ ವಿರುದ್ಧ ಅಭಿಯಾನ ಆರಂಭಿಸಿತ್ತು.

ಬುಧವಾರ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್, ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಮಗ್ರ ಶಿಕ್ಷಣ ಇಲಾಖೆ ನಿರ್ದೇಶಕ ರಿಜು, ಶಿಕ್ಷಣ ತಜ್ಞರು, ಚಿಂತಕ ಗುರುರಾಜ ಕರ್ಜಗಿ, ಶಿಕ್ಷಣ ತಜ್ಞರು ನಿರಂಜನ ಆರಾಧ್ಯ, ನಿಮ್ಹಾನ್ಸ್ ತಜ್ಞ ವೈದ್ಯರು ಹಾಗೂ ಖಾಸಗಿ ಶಾಲೆಗಳ ಸಂಘಟನೆ ಒಕ್ಕೂಟ (ಕ್ಯಾಮ್ಸ್) ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್ ಭಾಗವಹಿಸಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ 1 ರಿಂದ 5ನೇ ತರಗತಿಯವರೆಗಿನ ಮಕ್ಕಳ ಆನ್‌ಲೈನ್‌ ಶಿಕ್ಷಣವನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *