ಮಾತಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ?: ರಾಕ್‍ಲೈನ್ ವೆಂಕಟೇಶ್

Public TV
2 Min Read

ಬೆಂಗಳೂರು: ಮಾತಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ? ನಾನು ಯಾರ ಮನಸ್ಸಿಗೂ ನೋವು ಮಾಡಿಲ್ಲ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದಾರೆ.

ಇಂದು ಬೆಳಗ್ಗೆ ಜೆಡಿಎಸ್ ಕಾರ್ಯಕರ್ತರು ತಮ್ಮ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರ ಕುರಿತು ರಾಕ್‍ಲೈನ್ ವೆಂಕಟೇಶ್ ಪ್ರತಿಕ್ರಿಯಿಸಿದರು. ಕೆಲವರು ತಮಗೆ ಮಾತ್ರ ವಾಕ್ ಸ್ವಾತಂತ್ರ್ಯ ಇದೆ ಅಂತ ತಿಳಿದುಕೊಂಡಿದ್ದಾರೆ. ನಾನು ಯರ ಮನಸ್ಸಿಗೂ ನೀವು ಮಾಡುವ ಹೇಳಿಕೆ ನೀಡಿಲ್ಲ. ಇಂದು ಅವರ ಬೆಂಬಲಿಗರು ಯಾಕೆ ಪ್ರತಿಭಟನೆ ಮಾಡಿದ್ರು ಅನ್ನೋದು ನನಗೆ ಗೊತ್ತಿಲ್ಲ.

ಎಲ್ಲ ಪಕ್ಷದವರೂ ನನ್ನನ್ನು ರಾಜಕಾರಣಕ್ಕೆ ಕರೆದಿದ್ರೂ ಹೋಗಿಲ್ಲ. ನಾನು ಮಂಡ್ಯ ಮತ್ತು ರಾಜ್ಯ ರಾಜಕಾರಣಕ್ಕೂ ನಾನು ಬರಲ್ಲ. ಈ ಹಿಂದೆಯೇ ರಾಜಕಾರಣಕ್ಕೆ ನಾನು ಬರಲ್ಲ ಅಂತ ಹೇಳಿದ್ದು, ಈಗ್ಯಾಕೆ ಬರಲಿ. ನಾನು ಮೊದಲಿನಿಂದಲೂ ಅಂಬರೀಶ್ ಅವರ ಜೊತೆ ಚುನಾವಣೆಗೆ ಹೋಗಿದ್ದೇನೆ. ನಮ್ಮಿಬ್ಬರದ್ದು ಸುಮಾರು 20 ವರ್ಷಗಳ ಬಾಂಧವ್ಯ. ಕಾರಣಾಂತರಗಳಿಂದ ಸುಮಲತಾ ಅವರು ರಾಜಕಾರಣಕ್ಕೆ ಪ್ರವೇಶ ಮಾಡುವಂತಾಯ್ತು. ಇದನ್ನೂ ಓದಿ: ಸುಮಲತಾಗೆ ಯಾರೂ ಇಲ್ಲ ಅಂದ್ಕೋಬೇಡಿ, ಜೂ. ರೆಬೆಲ್ ಸ್ಟಾರ್ ಇದ್ದಾನೆ: ರಾಕ್‍ಲೈನ್ ವೆಂಕಟೇಶ್

ಅಂಬರೀಶ್ ತೋರಿಸುತ್ತಿದ್ದ ಪ್ರೀತಿ ಮತ್ತು ಬಾಂಧವ್ಯಕ್ಕಾಗಿ ಸುಮಲತಾ ಚುನಾವಣೆಗೆ ನಿಂತಾಗ ಅವರ ಬೆನ್ನುಲಾಬಿಗೆ ನಿಂತಿದ್ದೆ ಹೊರತು ಬೇರಾವ ಕಾರಣಕ್ಕೂ ಅಲ್ಲ. ನಾನು ಯಾವತ್ತೂ ಸಹ ಮಂಡ್ಯ ರಾಜಕಾರಣಕ್ಕೆ ಹೋಗಿಲ್ಲ. ಕಳೆದ ಎರಡು ವರ್ಷಗಳಿಂದ ಈ ರೀತಿಯ ಮಾತುಗಳ ಬಂದ್ರೂ ನಾನು ಎಲ್ಲಿಯೂ ರಾಜಕಾರಣಕ್ಕೆ ಸಂಬಂಧಿಸಿದ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.  ಇದನ್ನೂ ಓದಿ: ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಅವ್ರ ಹೆಸರು ಬಳಸ್ತಿದ್ದೀರಿ: ಸುಮಲತಾ ಕಿಡಿ

ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳು ಬರೋದು ಸಹಜ. ಆದ್ರೆ ಒಬ್ಬ ಮಹಿಳೆ ಬಗ್ಗೆ ಇಷ್ಟು ಕೆಳಮಟ್ಟದ ಹೇಳಿಕೆ ನೀಡುತ್ತಾರೆ. ಮಾಧ್ಯಮಗಳ ಮುಂದೆ ಉತ್ತರ ನೀಡುವ ಸುಮಲತಾ ಮನೆಯಲ್ಲಿ ಬಂದು ಕಣ್ಣೀರು ಹಾಕುತ್ತಾರೆ. ಹೇಗಾದ್ರೂ ಮಾಡಿ ಸುಮಲತಾ ಅವರನ್ನ ಮಂಡ್ಯದಿಂದ ಕಳುಹಿಸಬೇಕು ಎಂದು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ. ಅಂಬರೀಶ್ ಅವರ ಸ್ಮಾರಕದ ವಿಚಾರ ಬಂದಾಗ ಮಧ್ಯೆ ಪ್ರವೇಶ ಮಾಡಿದ್ದೇನೆಯೇ ಹೊರತು ರಾಜಕಾರಣದಲ್ಲಿ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಕ್‍ಲೈನ್ ನಿವಾಸಕ್ಕೆ ಜೆಡಿಎಸ್ ಕಾರ್ಯಕರ್ತರ ಮುತ್ತಿಗೆ ಯತ್ನ

ಡಾ.ರಾಜ್‍ಕುಮಾರ್ ಮತ್ತು ಡಾ.ಅಂಬರೀಶ್ ನಿಧನರಾದಾಗ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿದ್ದರು. ಅಂಬರೀಶ್ ಅವರ ಸ್ಮಾರಕಕ್ಕೆ ಕುಮಾರಸ್ವಾಮಿ ಅವರೇ ಜಾಗ ನೀಡಿದ್ದು, ಅವತ್ತು ಯಾರೇ ಸಿಎಂ ಆಗಿದ್ರೂ ಇದೇ ಕೆಲಸ ಮಾಡುತ್ತಿದ್ದರು. ಇದೇ ವಿಷಯವಾಗಿ ಹಿರಿಯ ನಟರಾದ ದೊಡ್ಡಣ್ಣ ಸಹ ಹೇಳಿಕೆ ನೀಡಿದ್ದಾರೆ. ಅಂಬರೀಶ್ ಸ್ಮಾರಕದ ವಿಚಾರವಾಗಿ ಮಾತನಾಡಿದ್ದೇನೆ ಎಂದು ಹೇಳಿದರು. ಎರಡೂ ಸಮಯದಲ್ಲಿಯೇ ಕುಮಾರಸ್ವಾಮಿ ಅವರ ಪಕ್ಕದಲ್ಲಿಯೇ ನಾನು ನಿಂತಿದ್ದೇನೆ. ಅಲ್ಲೊಂದು ಹೇಳಿಕೆ, ಇಲ್ಲೊಂದು ಹೇಳಿಕೆ ನೀಡುತ್ತಾರೆ. ಚಿತ್ರರಂಗದ ವಿಷಯ ಬಂದಾಗ ನಾನ್ಯಾಕೆ ಉತ್ತರ ನೀಡಬಾರದು ಎಂದು ಪ್ರಶ್ನಿಸಿದರು. ಶುಕ್ರವಾರ ರಾಜಕಾರಣದ ಬಗ್ಗೆ ಮಾತನಾಡಿದ್ರೆ ಅವರು ಹೇಳಿದ್ದಲ್ಲಿ ಕ್ಷಮೆ ಕೇಳುತ್ತೇನೆ ಎಂದರು. ಇದನ್ನೂ ಓದಿ: ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ: ಹೆಚ್‍ಡಿಕೆಗೆ ರಾಕ್‍ಲೈನ್ ವಾರ್ನಿಂಗ್

Share This Article
Leave a Comment

Leave a Reply

Your email address will not be published. Required fields are marked *