ಮಾಜಿ ಶಾಸಕ ಹಂಪಯ್ಯ ನಾಯಕ್ ಮೊಮ್ಮಕ್ಕಳನ್ನು ಅಪಹರಿಸಿ ಕೊಲೆಗೈದ್ರಾ?

Public TV
2 Min Read

ರಾಯಚೂರು: ಭಾನುವಾರ ಕಾಣೆಯಾಗಿದ್ದ ಜಿಲ್ಲೆಯ ಮಾನ್ವಿಯ ಮಾಜಿ ಶಾಸಕ ಹಂಪಯ್ಯ ನಾಯಕ್ ಮೊಮ್ಮಕ್ಕಳು ಶವವಾಗಿ ಪತ್ತೆಯಾಗಿರುವ ಪ್ರಕರಣ ಹಲವಾರು ಅನುಮಾನಗಳನ್ನ ಸೃಷ್ಟಿಸಿದೆ.

 

ಬಾಲಕರನ್ನ ಕೊಲೆ ಮಾಡಿ ಹಳ್ಳದಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಶವ ಪತ್ತೆಯಾದ ಸ್ಥಳದಲ್ಲಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಸಿಕ್ಕಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ.

ಮಾರ್ಚ್ 7 ಭಾನುವಾರ ಮಧ್ಯಾಹ್ನ 2 ಗಂಟೆ ವೇಳೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಕಾಣೆಯಾಗಿದ್ದ ಹಂಪಯ್ಯ ನಾಯಕ್ ಮೊಮ್ಮಕ್ಕಳಾದ 9 ವರ್ಷದ ವರುಣ್ ಹಾಗೂ 5 ವರ್ಷದ ಸಣ್ಣಯ್ಯ ಇಂದು ಬೆಳಿಗ್ಗೆ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆದ್ರೆ ಇಡೀದಿನ ಹಾಗೂ ಬೆಳಗಿನ ಜಾವ 3 ಗಂಟೆವರೆಗೂ ಗ್ರಾಮದಲ್ಲಿ ಹಳ್ಳದಲ್ಲಿ ಹುಡುಕಿದರೂ ಸಿಗದ ಮಕ್ಕಳು ಬೆಳಿಗ್ಗೆ 10 ಗಂಟೆ ಸುಮಾರಿಗೆ ಹಳ್ಳದಲ್ಲಿ ಪತ್ತೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಹಳ್ಳದಲ್ಲಿ ಮೊಣಕಾಲು ಮಟ್ಟಕ್ಕೆ ನೀರಿದ್ದು ಮಕ್ಕಳು ಈಜಲು ಬಂದು ಸಾವನ್ನಪ್ಪಿದ್ದಾರೆ ಎನ್ನುವುದು ಸಾಧ್ಯವಿಲ್ಲ ಅಂತ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಗ್ರಾಮದಲ್ಲಿ ಈ ಹಿಂದೆಯೂ ಇದೇ ರೀತಿ ಅನುಮಾನಾಸ್ಪದವಾಗಿ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ. ಈಗ ಪುನಃ ಘಟನೆ ಮರುಕಳಿಸಿರುವುದರಿಂದ ಮಕ್ಕಳ ಸಾವಿನ ಹಿಂದೆ ಬಲವಾದ ಕಾರಣವಿದೆ ಅಂತ ಅನುಮಾನಿಸಲಾಗಿದೆ. ಅಲ್ಲದೆ ಬಾಲಕರ ಶವಪತ್ತೆಯಾದ ಸ್ಥಳದಲ್ಲಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿವೆ. ಹೀಗಾಗಿ ಸಿರವಾರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದ ಕುಟುಂಬ ಕೊಲೆ ಶಂಕೆ ಪ್ರಕರಣ ದಾಖಲಿಸಲು ಮುಂದಾಗಿದೆ. ಪ್ರಭಾವಿ ರಾಜಕಾರಣಿ ಮೊಮ್ಮಕ್ಕಳಿಗೆ ರಕ್ಷಣೆಯಿಲ್ಲದೆ ಹೋದರೆ ಸಾಮಾನ್ಯರ ಗತಿ ಏನು ಅಂತ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

 

ಎರಡು ಬಾರಿ ಕಾಂಗ್ರೆಸ್‍ನಿಂದ ಮಾನ್ವಿ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾಗಿದ್ದ ಹಂಪಯ್ಯ ನಾಯಕ್ ಸ್ವಗ್ರಾಮ ಬಲ್ಲಟಗಿಯಲ್ಲೇ ವಾಸವಾಗಿದ್ದಾರೆ. ಹಂಪಯ್ಯ ನಾಯಕ್ ಪುತ್ರ ಶಿವಾನಂದ ಮಕ್ಕಳಾದ ವರುಣ್ ಹಾಗೂ ಸಣ್ಣಯ್ಯ ಊರಜಾತ್ರೆಗೆ ಮಾನ್ವಿಯಿಂದ ಬಂದಿದ್ದರು. ಮಧ್ಯಾಹ್ನ ವೇಳೆ ಮನೆಯ ಹೊರಗಡೆ ಆಟವಾಡುತ್ತಿದ್ದ ಬಾಲಕರು ಏಕಾಏಕಿ ನಾಪತ್ತೆಯಾಗಿದ್ದರು. ಸಿರವಾರ ಹಾಗೂ ಕವಿತಾಳ ಠಾಣೆ ಪೊಲೀಸರಿಂದ ಬಾಲಕರಿಗಾಗಿ ಹುಡುಕಾಟ ನಡೆದಿತ್ತು, ಗ್ರಾಮದ ಹಳ್ಳದಲ್ಲೇ ಇಂದು ಬೆಳಿಗ್ಗೆ ಶವಗಳು ಪತ್ತೆಯಾಗಿವೆ. ತನಿಖೆ ಆರಂಭಗೊಡಿದ್ದು ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿದು ಬರಲಿದೆ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕಮ್ ಹೇಳಿದ್ದಾರೆ.

ಇಬ್ಬರು ಮಕ್ಕಳನ್ನು ಕಳೆದುಕೊಂಡ ಹಂಪಯ್ಯ ನಾಯಕ್ ಕುಟುಂಬ ದುಃಖದಲ್ಲಿ ಮುಳುಗಿದೆ. ಆದ್ರೆ ಸಾವಿನ ಬಗ್ಗೆ ಅನುಮಾನಗಳು ಇರುವುದರಿಂದ ಇದೊಂದು ವ್ಯವಸ್ಥಿತ ಕೊಲೆ ಎಂದು ಶಂಕಿಸಿದ್ದಾರೆ. ಘಟನೆ ಹಿನ್ನೆಲೆ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಬಳಿಕವಷ್ಟೇ ಮಕ್ಕಳ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಾಗಿದೆ. ಮಕ್ಕಳ ಸಾವಿಗೆ ಮಾಜಿ ಎಂಎಲ್ ಸಿ ಎನ್ ಎಸ್ ಬೋಸರಾಜು, ಮಾಜಿ ಸಂಸದ ಬಿ.ವಿ.ನಾಯಕ್ ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *