ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

Public TV
2 Min Read

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ(84) ಚಿಕಿತ್ಸೆ ಫಲಕಾರಿಯಾಗದೆ ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ರ ಅಭಿಜಿತ್ ಮುಖರ್ಜಿ ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಪ್ರಣಬ್ ಮುಖರ್ಜಿ ತೀರ್ವ ಅಸ್ವಸ್ಥರಾಗಿದ್ದರು. ಆಗಸ್ಟ್ 10 ರಂದು ಬ್ರೇನ್ ಸರ್ಜರಿಯಾದ ನಂತರ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಕಳೆದೊಂದು ವಾರದಿಂದ ಅವರು ಕೋಮಾಗೆ ಜಾರಿದ್ದರು. ಇದಾದ ಬಳಿಕ ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿರಲಿಲ್ಲ.

ಪ್ರಣಬ್ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಚೇತರಿಕೆ ಕಂಡು ಬರುತ್ತಿಲ್ಲ ಎಂದು ದೆಹಲಿ ಆರ್ಮಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದರು. ಅಲ್ಲದೆ ಪ್ರಣಬ್ ಮಗ ಅಭಿಷೇಕ್ ಮುಖರ್ಜಿ ಟ್ವೀಟ್ ಮಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ತಂದೆಯ ಆರೋಗ್ಯದಲ್ಲಿ ನಿಧಾನವಾಗಿ ಚೇತರಿಕೆ ಕಂಡು ಬರುತ್ತಿದ್ದು, ಅವರು ಆದಷ್ಟು ಬೇಗ ಗುಣಮುಖವಾಗುವಂತೆ ಹಾರೈಸಿ ಎಂದು ಬರೆದುಕೊಂಡಿದ್ದರು.


ಆಗಸ್ಟ್ 10ರಂದು ಪ್ರಣಬ್ ಮುಖರ್ಜಿ ಅವರು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದು, ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಆ ಬಳಿಕ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಿದರೂ ಯಾವುದೇ ರೀತಿ ಚೇತರಿಕೆ ಕಂಡು ಬಂದಿರಲಿಲ್ಲ. ಹೀಗಾಗಿ ಅವರನ್ನು ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಿಗೆ ಕೊವಿಡ್-19 ಸೋಂಕು ತಗಲಿರುವುದು ದೃಢಪಟ್ಟಿತ್ತು.

ಈ ಸಂಬಂಧ ಸ್ವತಃ ಮಾಜಿ ರಾಷ್ಟ್ರಪತಿಗಳೇ ಟ್ವೀಟ್ ಮಾಡಿ, ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇದೀಗ ವರದಿ ಪಾಸಿಟಿವ್ ಎಂದು ಬಂದಿದ್ದು, ಯಾರೂ ಆತಂಕ ಪಡಬೇಡಿ. ಹಾಗೆಯೇ ಕಳೆದ ಒಂದು ವಾರದಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಈ ಕೂಡಲೇ ಪರೀಕ್ಷೆಗೆ ಒಳಗಾಗಿ, ಹೋಂ ಐಸೋಲೇಟ್ ಆಗಿ ಎಂದು ಮನವಿ ಮಾಡಿಕೊಂಡಿದ್ದರು.

ಪ್ರಣಬ್ ಮುಖರ್ಜಿ ಅವರು ಜುಲೈ 25, 2012ರಿಂದ ಜುಲೈ 12, 2017ರ ವರೆಗೆ ರಾಷ್ಟ್ರಪತಿಯಾಗಿದ್ದರು. ಪ್ರಣಬ್ ಅವರಿಗೆ 2008ರಲ್ಲಿ ಪದ್ಮ ವಿಭೂಷಣ ಹಾಗೂ 2019ರಲ್ಲಿ ಭಾರತ ರತ್ನ ನೀಡಿ ಗೌರವಿಸಲಾಗಿದೆ.

ಡಿಸೆಂಬರ್ 11, 1935ರಲ್ಲಿ ಜನಸಿದ್ದ ಪ್ರಣಬ್ ಮುಖರ್ಜಿ ಅವರಿಗೆ 84 ವರ್ಷ ವಯಸ್ಸಾಗಿತ್ತು. ಮಕ್ಕಳಾದ ಶರ್ಮಿಷ್ಠ ಮುಖರ್ಜಿ, ಅಭಿಜಿತ್ ಮುಖರ್ಜಿ, ಇಂದ್ರಜಿತ್ ಮುಖರ್ಜಿ ಅವರನ್ನು ಅಗಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *