ಮಾಜಿ ಡಿಸಿಎಂ ಪರಮೇಶ್ವರ್‌ ಅಣ್ಣನ ಮಗಳ ಹೆಸರು ಹೇಳಿ ವಂಚನೆ – ಕಿಲಾಡಿ ಮಹಿಳೆ ಅರೆಸ್ಟ್‌

Public TV
3 Min Read

– 4 ಲಕ್ಷ ಬಾಡಿಗೆ ಉಳಿಸಿಕೊಂಡಿದ್ದ ಮಹಿಳೆ
– ದುಡ್ಡು ಕೇಳಿದ್ದಕ್ಕೆ ಮದುವೆಯ ನಾಟಕ
– ಪ್ರೀತಿ ನಿರಾಕರಿಸಿದ್ದಕ್ಕೆ ರೇಪ್‌ ಕೇಸ್‌ ಬೆದರಿಕೆ

ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್‌ ಅವರ ಅಣ್ಣನ ಮಗಳ ಹೆಸರನ್ನು ಹೇಳಿಕೊಂಡು ಅಮಾಯಕರನ್ನು ವಂಚಿಸುತ್ತಿದ್ದ ಕಿಲಾಡಿ ಮಹಿಳೆಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಜ್ಞಾನ ಗಂಗಾ ಲೇಔಟ್‌ ನಿವಾಸಿ ಪಲ್ಲವಿ (32) ಬಂಧಿತ ಆರೋಪಿತೆ. ನಾನೊಬ್ಬಳು ಸಮಾಜಸೇವಕಿ, ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಬ್ಯಾಂಕಿನಿಂದ ಸಾಲ ಕೊಡಿಸುತ್ತೇನೆ ಎಂದು ಹೇಳಿ ವಂಚಿಸುತ್ತಿದ್ದಳು. 10ಕ್ಕೂ ಹೆಚ್ಚು ಜನರಿಗೆ ಈಕೆ ವಂಚಿಸಿದ್ದು ಈಗ ಈಕೆಯನ್ನು ಜ್ಞಾನ ಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಜನಾರ್ದನ್‌ ಎಂಬವರು ಬಾಡಿಗೆ ಕಾರಿನ ವ್ಯವಹಾರ ಮಾಡುತ್ತಿದ್ದು ಅವರ ಬಳಿ ಪಲ್ಲವಿ, ಮಾಜಿ ಡಿಸಿಎಂ ಪರಮೇಶ್ವರ್‌ ಅವರ ಅಣ್ಣನ ಮಗಳಾದ ನಾನು ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕ್ ನಿಂದ ಸಾಲ ಕೊಡಿಸುವ ಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದಳು. ಇದಾದ ಬಳಿಕ ಕೋವಿಡ್‌ 19 ಲಾಕ್‌ಡೌನ್‌ ಸಮಯದಲ್ಲಿ 2 ದಿನದ ಮಟ್ಟಿಗೆ ಕಾರು ಬಾಡಿಗೆಗೆ ಬೇಕು ಎಂದು ರಾಜಶೇಖರ್‌ ಬಳಿ ಕೇಳಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಕಾರು ಚಾಲಕ ಯೋಗೇಶ್‌ ಪಲ್ಲವಿಯನ್ನು ಸಂಪರ್ಕಿಸಿದ್ದರು.

ಎರಡು ದಿನ ಬೆಂಗಳೂರು, ತುಮಕೂರಿಗೆ ಕಾರಿನಲ್ಲಿ ಸುತ್ತಾಡಿದ ಬಳಿಕ ಬಾಡಿಗೆ ನೀಡಿ ನಂತರ ತಾನು ಕರೆದಾಗ ಬಾಡಿಗೆಗೆ ಬರಬೇಕು ಎಂದು ಪಲ್ಲವಿ ಸೂಚಿಸಿದ್ದಳು. ಇದಾದ ಬಳಿಕ ಹಲವು ಬಾರಿ ಬಾಡಿಗೆ ಪಡೆದಿದ್ದು ಒಟ್ಟು 40 ಸಾವಿರ ಕಿ.ಮೀ ಸುತ್ತಾಡಿಸಿ 4 ಲಕ್ಷ ರೂ. ಬಾಡಿಗೆ ಉಳಿಸಿಕೊಂಡಿದ್ದಳು.

ಯೋಗೇಶ್‌ ಬಾಡಿಗೆ ದುಡನ್ನು ಕೇಳಿದಾಗ ಏನೇನೋ ಸಬೂಬು ಹೇಳಲು ಆರಂಭಿಸಿದಳು. ಬಾಡಿಗೆ ನೀಡಲೇಬೇಕು ಎಂದು ಹೇಳಿದಾಗ ಯೋಗೇಶ್‌ ಬಳಿ ಪ್ರೀತಿಯ ನಾಟಕವಾಡಲು ಆರಂಭಿಸಿದಳು. ನೀನು ಅಂದರೆ ನನಗೆ ಇಷ್ಟ. ನನ್ನನ್ನು ಮದುವೆಯಾಗು ಎಂದು ಹೇಳಲು ಆರಂಭಿಸಿದಳು. ಇದಕ್ಕೆ ಯೋಗೇಶ್‌ ನಿರಾಕರಿಸಿದಾಗ ಪಲ್ಲವಿ, ನನ್ನನ್ನು ಮದುವೆಯಾಗದೇ ಇದ್ದರೆ ನಿನ್ನ ವಿರುದ್ಧ ಅತ್ಯಾಚಾರದ ಕೇಸ್‌ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು.

ಪಲ್ಲವಿಯ ಈ ನಡೆಯ ಬಗ್ಗೆ ಯೋಗೇಶ್‌ ಮಾಲಿಕ ಜನಾರ್ದನ್‌ಗೆ ತಿಳಿಸಿದ್ದರು. ಈಕೆಯ ವರ್ತನೆಯಿಂದ ಅನುಮಾನಗೊಂಡ ಜನಾರ್ದನ್‌ ಮತ್ತು ಯೋಗೇಶ್‌ ಸದಾಶಿವ ನಗರದಲ್ಲಿರುವ ಪರಮೇಶ್ವರ್‌ ಅವರ ನಿವಾಸಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಪರಮೇಶ್ವರ್‌ ಪತ್ನಿ ಈಕೆ ಯಾರು ಎನ್ನುವುದೇ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ತುಮಕೂರಿನಲ್ಲಿದ್ದ ಪರಮೇಶ್ವರ್‌ ಅವರ ಬಳಿ ಈಕೆಯನ್ನು ಕರೆದುಕೊಂಡು ಹೋಗಲಾಗಿತ್ತು. ಪರಮೇಶ್ವರ್‌ ಈಕೆ ನನ್ನ ಅಣ್ಣನ ಮಗಳಲ್ಲ. ಕೂಡಲೇ ದೂರು ನೀಡಿ ಎಂದು ಸೂಚಿಸಿದ್ದರು.

ಕಿಡ್ನಾಪ್‌ ದೂರು:
ಈಕೆಯನ್ನು ಕರೆ ತರುತ್ತಿದ್ದಾಗ ಕೆಂಗೇರಿ ಸಮೀಪ ನನಗೆ ಮೂತ್ರ ವಿಸರ್ಜನೆ ಬರುತ್ತಿದೆ ಎಂದು ಹೇಳಿ ಕಾರನ್ನು ನಿಲ್ಲಿಸಿದ್ದಾಳೆ. ಈ ವೇಳೆ ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿ ಯೋಗೇಶ್‌ ಮತ್ತು ಇತರರು ನನ್ನನ್ನು ಕಿಡ್ನಾಪ್‌ ಮಾಡಿದ್ದಾರೆ ಎಂದು ಹೇಳಿದ್ದಾಳೆ. ಕರೆಯ ಹಿನ್ನೆಲೆಯಲ್ಲಿ ಅಲರ್ಟ್‌ ಆದ ಕೆಂಗೇರಿ ಪೊಲೀಸರು ಯೋಗೇಶ್‌ಗೆ ಕರೆ ಮಾಡಿ, ಪಲ್ಲವಿ ಎಂಬಾಕೆಯನ್ನು ಕಿಡ್ನಾಪ್‌ ಮಾಡಿದ್ದೀರಿ ಎಂಬ ದೂರು ಕಂಟ್ರೋಲ್‌ ರೂಂಗೆ ಬಂದಿದೆ. ಕೂಡಲೇ ಆಕೆಯನ್ನು ಪೊಲೀಸ್‌ ಠಾಣೆಗೆ ಕರೆ ತನ್ನಿ ಎಂದು ಸೂಚಿಸಿದ್ದಾರೆ. ಪೊಲೀಸರ ಸೂಚನೆಯ ಹಿನ್ನೆಲೆಯಲ್ಲಿ ಆಕೆಯನ್ನು ಕೆಂಗೇರಿ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು.

ಪೊಲಸ್‌ ಅಧಿಕಾರಿಗಳ ವಿಚಾರಣೆ ಸಮಯದಲ್ಲಿ ಪರಮೇಶ್ವರ್‌ ಅವರ ಅಣ್ಣನ ಮಗಳು ಎಂದು ಹೇಳಿ ಹಲವು ಜನರಿಗೆ ಮೋಸ ಮಾಡಿದ್ದನ್ನು ಪಲ್ಲವಿ ತಪ್ಪೊಪ್ಪಿಕೊಂಡಿದ್ದಾಳೆ. ವಿಚಾರಣೆ ನಡೆಸಿದ ಕೆಂಗೇರಿ ಪೊಲೀಸರು ಜ್ಞಾನ ಭಾರತಿ ಪೊಲೀಸ್‌ ಠಾಣೆಯಲ್ಲಿ ಈಕೆಯ ವಿರುದ್ಧ ದೂರು ನೀಡುವಂತೆ ಸೂಚಿಸಿದ್ದಾರೆ. ಮಹಿಳಾ ಪೊಲೀಸರ ಬೆಂಗಾವಲಿನಲ್ಲಿ ಈಕೆಯನ್ನು ಕರೆತಂದ ಬಳಿಕ ಜ್ಞಾನ ಭಾರತಿ ಠಾಣೆಯಲ್ಲಿ ದೂರು ನೀಡಿದ್ದು, ಈಗ ಬಂಧಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *