ಕಲಬುರಗಿ: ನೆರೆಯ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ಇಡೀ ರಾಜ್ಯದ ಜನತೆ ಆಕ್ರೋಶ ಹೊರ ಹಾಕುತ್ತಿರುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರು ತಮ್ಮ ಅಭಿಪ್ರಾಯ ತಿಳಿಸಿರಬಹುದು ಎಂದು ಹೇಳುವ ಮೂಲಕ ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಮಹಾರಾಷ್ಟ್ರ ಸಿಎಂ ತಮ್ಮ ಅಭಿಪ್ರಾಯ ತಿಳಿಸಿರಬಹುದು. ಕಾಂಗ್ರೆಸ್ ನೆಲ ಮತ್ತು ಜನ ವಿಚಾರದಲ್ಲಿ ಬದ್ಧವಾಗಿದೆ. ಈಗಾಗಲೇ ಸರೋಜಿನಿ ಮಹಿಷಿ ವರದಿ, ಮಹಾಜನ್ ವರದಿಗಳೆಲ್ಲ ಬಂದಿದೆ. ಈಗಾಗಲೇ ಗಡಿ ಭಾಗಗಳನ್ನ ಗುರುತಿಸಿ ವರ್ಷಗಳೇ ಕಳೆದಿವೆ. ಕಾಂಗ್ರೆಸ್ ಸರ್ಕಾರ ಈ ಹಿಂದೆಯೇ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಿ ಬೆಳಗಾವಿ ನಮ್ಮದು ಅಂತ ಹೇಳಿದೆ. ರಾಜಕೀಯವಾಗಿ ನೀಡುವ ಹೇಳಿಕೆಗಳಿಗೆ ನಾವು ಪ್ರತಿಕ್ರಿಯೆ ನೀಡುತ್ತ ಹೋದ್ರೆ ಏನೂ ಆಗಲ್ಲ. ಮಹಾರಾಷ್ಟ್ರದಲ್ಲಿ ಬೆಂಬಲ ನೀಡಿದ ಕಾರಣಕ್ಕೆ ಎಲ್ಲವನ್ನು ಒಪ್ಪಿಕೊಳ್ಳಲು ಆಗಲ್ಲ ಎಂದರು.
ಉದ್ಧವ್ ಠಾಕ್ರೆ ಹೇಳಿದ್ದೇನು?:
ಕರ್ನಾಟಕ ಆಕ್ರಮಿತ ಕೆಲ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಹುಸಂಖ್ಯೆಯಲ್ಲಿ ಮರಾಠಿ ಭಾಷಿಕರಿರುವ ಹಾಗೂ ಮರಾಠಿ ಸಂಸ್ಕೃತಿಯನ್ನು ಒಳಗೊಂಡಿರುವ ಕೆಲವು ಪ್ರದೇಶವನ್ನು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಇದು ಗಡಿ ವಿವಾದಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದವರಿಗೆ ನಾವು ನೀಡುವ ನಿಜವಾದ ಗೌರವವಾಗಿದೆ ಎಂದು ಮಹಾರಾಷ್ಟ್ರ ಸಿಎಂ ಕಚೇರಿ ಟ್ವೀಟ್ ಮಾಡಿತ್ತು.