ಮಹಾ ವಲಸೆ – ಮುಂಬೈ, ದೆಹಲಿ ನಗರಗಳನ್ನ ತೊರೆಯುತ್ತಿರೋ ಪ್ರವಾಸಿ ಕಾರ್ಮಿಕರು

Public TV
1 Min Read

– ಸೂರತ್ ತೊರೆದ 45 ಸಾವಿರ ಜನ

ಮುಂಬೈ: ಕಳೆದ 24 ಗಂಟೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗಿವೆ. ದೇಶದ 10 ರಾಜ್ಯಗಳಿಂದಲೇ ಅತ್ಯಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಪ್ರವಾಸಿ ಕಾರ್ಮಿಕರು ಮತ್ತೆ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಮುಂಬೈ, ನಾಗ್ಪುರ, ದೆಹಲಿ, ಪುಣೆ ಸೇರಿದಂತೆ ಹಲವು ನಗರಗಳ ರೈಲ್ವೇ ನಿಲ್ದಾಣಗಳು ಕಾರ್ಮಿಕರಿಂದ ತುಂಬಿ ತುಳುಕುತ್ತಿವೆ. ನಗರದ ಗಡಿ ಭಾಗಗಳಲ್ಲಿ ನಿಂತಿರುವ ಕಾರ್ಮಿಕರು ಸಿಕ್ಕ ವಾಹನಗಳನ್ನ ಹತ್ತಿ ಊರು ಸೇರಿಕೊಳ್ಳುವ ಅವಸರದಲ್ಲಿದ್ದಾರೆ.

ಕಳೆದೊಂದು ವಾರದಿಂದ ಮುಂಬೈ, ದೆಹಲಿಯ ರೈಲ್ವೇ, ಬಸ್ ನಿಲ್ದಾಣಗಳು ಕಾರ್ಮಿಕರಿಂದ ತುಂಬಿ ತುಳುಕುತ್ತಿವೆ. 2020ರಲ್ಲಿ ಸರ್ಕಾರ ದಿಢೀರ್ ಲಾಕ್‍ಡೌನ್ ಘೋಷಣೆ ಮಾಡಿದರ ಪರಿಣಾಮ ಇಡೀ ದೇಶ ಒಂದೇ ದಿನ ಸ್ತಬ್ಧಗೊಂಡಿತ್ತು. ದಿನಗೂಲಿ ನಂಬಿ ಕೆಲಸ ಮಾಡುತ್ತಿದ್ದ ಅದೆಷ್ಟೋ ಜನ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಹಾರಾಷ್ಟ್ರ, ದೆಹಲಿ, ಕೇರಳ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಕಠಿಣ ನಿಯಮಗಳನ್ನ ಜಾರಿಗೆ ತಂದಿವೆ. ಹೀಗಾಗಿ ಭಯಗೊಂಡ ಕಾರ್ಮಿಕರು ಊರು ಸೇರಿಕೊಂಡ್ರೆ ಸಾಕು ಅಂತ ಗಂಟುಮೂಟೆ ಸಹಿತ ಪ್ರಯಾಣ ಬೆಳೆಸುತ್ತಿದ್ದಾರೆ.

ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಪ್ರವಾಸಿ ಕಾರ್ಮಿಕರು ಪ್ರಯಾಣ ಬೆಳೆಸುತ್ತಿದ್ದಾರೆ. ದೆಹಲಿಯ ಎನ್‍ಸಿಆರ್, ಗುರುಗ್ರಾಮಗಳಲ್ಲಿ ಬಹುತೇಕ ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರ ಸಂಖ್ಯೆ ಇಳಿಮುಖವಾಗುತ್ತಿದೆ. ಮುಂಬೈ ಲೋಕಮಾನ್ಯ ತಿಲಕ್ ರೈಲ್ವೇ ನಿಲ್ದಾಣ, ಠಾಣೆ, ಕಲ್ಯಾಣ್, ಕುರ್ಲಾ, ವಿಹಾರ್ ನಿಲ್ದಾಣಗಳತ್ತ ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರ ಆಗಮನವಾಗ್ತಿದೆ.

ಮಹಾರಾಷ್ಟ್ರದ ನಾಗ್ಪುರ ನಗರವಂತೂ ಒಂದು ತಿಂಗಳಿನಿಂದ ಭಾಗಶಃ ಲಾಕ್‍ಡೌನ್ ಆಗಿದೆ. 2 ಸಾವಿರಕ್ಕೂ ಹೆಚ್ಚು ಕಂಪನಿಗಳಿದ್ದು, ಇದರಲ್ಲಿ ಶೇ.40ರಷ್ಟು ಜನರ ಅನ್ಯ ರಾಜ್ಯಗಳಿಂದ ಬಂದವರು. ನಾಗ್ಪುರದಲ್ಲಿ ಬಹುತೇಕ ಕಂಪನಿಗಳು ಬಾಗಿಲು ಹಾಕಿದ ಪರಿಣಾಮ ನೌಕರರು ಊರು ಸೇರಿಕೊಳ್ಳುತ್ತಿದ್ದಾರೆ.

ಸುಮಾರು 45 ಸಾವಿರ ಕಾರ್ಮಿಕರು ಗುಜರಾತಿನ ಸೂರತ್ ನಗರ ತೊರೆದಿದ್ದಾರೆ. ಲಾಕ್‍ಡೌನ್ ಮಾಡಲ್ಲ. ಹಾಗಾಗಿ ಕಾರ್ಮಿಕರು ನಗರ ತೊರೆಯಬಾರದು ಅಂತ ಗುಜರಾತ್ ಸಿಎಂ ಸ್ಪಷ್ಟನೆ ಸಹ ನೀಡಿದ್ದಾರೆ. ಆದ್ರೂ ಕೊರೊನಾಂತಕಕ್ಕೆ ಒಳಗಾಗಿರುವ ಪ್ರವಾಸಿ ಕಾರ್ಮಿಕರು ಸೂರತ್ ತೊರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *