ಮಹಾ ಎಡವಟ್ಟು- SSLC ಪರೀಕ್ಷೆ ಬರೆದ ಕೊರೊನಾ ಸೋಂಕಿತ ವಿದ್ಯಾರ್ಥಿ

Public TV
2 Min Read

-ಕಣ್ಣೀರು ಹಾಕುತ್ತಾ ಆಸ್ಪತ್ರೆಗೆ ಹೋದ ವಿದ್ಯಾರ್ಥಿಗಳು
-ಸೋಂಕಿತನ ಜೊತೆ 19 ಮಂದಿ ಪರೀಕ್ಷೆ ಬರೆದ್ರು
-ಬಸ್‍ನಲ್ಲಿ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿ

ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದ ಸರ್ಕಾರಿ ಶಾಲೆಯಲ್ಲಿ ಕೊರೊನಾ ಸೋಂಕಿತ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾನೆ. ಈ ಹಿಂದೆ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದನು. ಹಾಗಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗಿದ್ದನು. ವಿದ್ಯಾರ್ಥಿಗೆ ಸೋಂಕು ತಗುಲಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಆರೋಗ್ಯಾಧಿಕಾರಿಗಳ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚುತ್ತಿದ್ದಾರೆ.

ಮಲ್ಲಿಪಟ್ಟಣದ ಸರ್ಕಾರಿ ಶಾಲೆಯ ಕೊಠಡಿ ನಂಬರ್ ಒಂದರಲ್ಲಿ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾನೆ. ಈ ಕೊಠಡಿಯಲ್ಲಿ ಒಟ್ಟು 19 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸೋಂಕಿತನನ್ನು ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ಬರೆಸಲಾಗಿದೆ. ಹಾಗೆ ಕೊಠಡಿಯಲ್ಲಿ ಆತನ ಜೊತೆಯಲ್ಲಿದ್ದ ವಿದ್ಯಾರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೋಗ್ಯ ಇಲಾಖೆಯ ಮಹಾ ಎಡವಟ್ಟು: ಸಾರ್ವಜನಿಕ ಆಸ್ಪತ್ರೆಯಲ್ಲಿ ಡೆಂಗ್ಯೂ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಯ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಗಂಟಲು ದ್ರವ ಪರೀಕ್ಷೆ ರಿಸಲ್ಟ್ ಇನ್ನೂ ಬಂದಿರದ ಕಾರಣ ವಿದ್ಯಾರ್ಥಿ ಎಲ್ಲರೊಂದಿಗೆ ಸಹಜವಾಗಿ ಕುಳಿತು ಪರೀಕ್ಷೆ ಬರೆದಿದ್ದಾನೆ. ಕೋವಿಡ್-19 ವರದಿ ಬರೋವರೆಗೂ ವಿದ್ಯಾರ್ಥಿಯನ್ನ ಪ್ರತ್ಯೇಕವಾಗಿ ಕೂರಿಸಿ ಪರೀಕ್ಷೆ ಬರೆಸಬೇಕಿತ್ತು. ಆದರೆ ಈ ಬಗ್ಗೆ ಶಿಕ್ಷಕರು ಮತ್ತು ಆರೋಗ್ಯ ಇಲಾಖೆ ನಡುವೆ ಪರಸ್ಪರ ಸಮನ್ವಯದ ಕೊರತೆಯಿಂದಾಗಿ ಇಷ್ಟು ದೊಡ್ಡ ಅನಾಹುತ ನಡೆದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ತಹಶೀಲ್ದಾರ ರೇಣು ಕುಮಾರ್, ಆರೋಗ್ಯ ಇಲಾಖೆಯಿಂದ ಮಾಹಿತಿ ಬಂದ ತಕ್ಷಣ ವಿದ್ಯಾರ್ಥಿಯನ್ನು ಬೇರೆಡೆ ಕೂರಿಸಿ ಪರೀಕ್ಷೆ ಬರೆಸಿದ್ದೇವೆ. ಸಂಬಂಧಪಟ್ಟ ರೂಮಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಅವರನ್ನೆಲ್ಲ ಚೆಕಪ್‍ಗೆ ಕಳುಹಿಸಿದ್ದು, ಪೋಷಕರು ಆತಂಕ ಪಡಬೇಡಿ. ಈ ತಕ್ಷಣವೇ ಶಾಲಾ ಕೊಠಡಿಗಳಿಗೆ ಔಷಧಿ ಸಿಂಪಡಣೆ ಮಾಡಲಾಗುವುದು. ಸೋಮವಾರ ಎಂದಿನಂತೆ ಮುಂದಿನ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಕಣ್ಣೀರು ಹಾಕುತ್ತಾ ಆಸ್ಪತ್ರೆಗೆ ಹೋದ ವಿದ್ಯಾರ್ಥಿಗಳು: ತಮ್ಮ ಜೊತೆಗೆ ಕೊರೊನಾ ಸೋಂಕಿತ ಪರೀಕ್ಷೆ ಬರೆದ ವಿಷಯ ತಿಳಿದು ಇತರ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಎಲ್ಲ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಶಾಲೆಯಿಂದ ಹೊರ ಬಂದ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಾ ಆಸ್ಪತ್ರೆಗೆ ಹೋಗುವ ದೃಶ್ಯ ಕಣ್ಣೀರು ತರಿಸುವಂತಿತ್ತು. ಸೋಂಕಿತನ ಕೊಠಡಿಯಲ್ಲಿದ್ದ ಆರು ಜನ ಹೆಣ್ಣು ಮಕ್ಕಳು, 12 ಜನ ಗಂಡು ಮಕ್ಕಳು ಮತ್ತು ಒಬ್ಬರು ಟೀಚರ್ ಗೆ ಕ್ವಾರಂಟೈನ್ ಮಾಡಲಾಗಿದೆ. ಇದೀಗ ಆರೋಗ್ಯಧಿಕಾರಿಗಳು ಸೋಂಕಿತನ ಸಂಪರ್ಕದಲ್ಲಿದ್ದ ಎಲ್ಲರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿಕೊಳ್ಳುತ್ತಿದ್ದಾರೆ.

ಪರೀಕ್ಷೆ ಬರೆದ ವಿದ್ಯಾರ್ಥಿಗೆ ಯಾವುದೇ ಜ್ವರ ಹಾಗೂ ಕೊರೊನಾ ಲಕ್ಷಣಗಳು ಇರಲಿಲ್ಲ. ಡೆಂಗ್ಯೂನಿಂದ ಬಳಲುತ್ತಿದ್ದಾಗ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಇದೀಗ ವಿದ್ಯಾರ್ಥಿಗೆ ಸೋಂಕು ತಗುಲಿರೋದು ಖಚಿತವಾಗಿದ್ದು, ಉಳಿದ ವಿದ್ಯಾರ್ಥಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ನಾಳೆ ಮಧ್ಯಾಹ್ನದೊಳಗೆ ವಿದ್ಯಾರ್ಥಿಗಳ ವರದಿ ಬರಲಿದ್ದು, ಮುಂದಿನ ಪರೀಕ್ಷೆಗೆ ಹಾಜರಾಗಬೇಕಾ ಎಂಬುದನ್ನು ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *