ಮಹಾರಾಷ್ಟ್ರ ಮಾದರಿಯಲ್ಲಿ ಭೋವಿ ಸಮಾಜದವರಿಗೆ ಮಾತ್ರ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿ: ಬಸವರಾಜು ಆಗ್ರಹ

Public TV
2 Min Read

ಬೆಂಗಳೂರು: ರಾಜ್ಯದ ಕಲ್ಲು ಗಣಿಗಾರಿಕೆ ಕೇಂದ್ರಗಳನ್ನು ಬಂಡವಾಳಶಾಹಿಗಳಿಗೆ ನೀಡುವ ಮೂಲಕ, ಇದನ್ನೇ ಕುಲ ಕಸುಬಾಗಿ ಮಾಡಿಕೊಂಡಿರುವ ಭೋವಿ ಸಮಾಜದವರ ಮೇಲೆ ಆರ್ಥಿಕವಾಗಿ ಅತ್ಯಾಚಾರ ಮಾಡಲಾಗುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ಮುಖಂಡ, ವಿರಾಜಪೇಟೆಯ ಮಾಜಿ ಶಾಸಕರಾದ ಎಚ್.ಡಿ.ಬಸವರಾಜುರವರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಸವರಾಜುರವರು, ಅನೇಕ ಶತಮಾನಗಳಿಂದಲೂ ಭೋವಿ ಸಮಾಜದವರು ಕಲ್ಲು ಗಣಿಗಾರಿಕೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಂಡವಾಳಶಾಹಿಗಳು, ಶಾಸಕರಿಗೆ, ರಾಜಕೀಯ ಬಲಾಢ್ಯರಿಗೆ ಮಾತ್ರ ಕ್ರಷರ್ ಯೂನಿಟ್‍ಗಳನ್ನು ನೀಡುವ ಮೂಲಕ ಭೋವಿ ಸಮಾಜದವರ ಉದ್ಯೋಗವನ್ನು ಕಿತ್ತುಕೊಳ್ಳಲಾಗುತ್ತಿದೆ. ರಾಜ್ಯದ ಯಾವ ಶಾಸಕರು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಡವಾಳಶಾಹಿಗಳಿಗೆ ನಾಡಿನ ಸಂಪನ್ಮೂಲದ ಮೇಲೆ ಯಾವುದೇ ರೀತಿಯ ಭಾವನಾತ್ಮಕ ಸಂಬಂಧ ಇರುವುದಿಲ್ಲ. ಕೇವಲ ದುಡ್ಡು ಮಾಡುವ ಉದ್ದೇಶ ಹೊಂದಿರುವ ಅವರು ರಾಜ್ಯದ ಸಂಪನ್ಮೂಲವನ್ನು ಸಾಧ್ಯವಾದಷ್ಟು ಲೂಟಿ ಮಾಡುತ್ತಿದ್ದಾರೆ. ಇದಕ್ಕಾಗಿ ಎಲ್ಲ ರೀತಿಯ ಅಕ್ರಮವನ್ನು ಬಂಡವಾಳಶಾಹಿಗಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಕಲ್ಲು ಗಣಿಗಾರಿಕೆಯನ್ನು ಭೋವಿ ಸಮಾಜದವರಿಗೆ ಮೀಸಲಿರಿಸಲಾಗಿದೆ. ರಾಜ್ಯದಲ್ಲೂ ಗಣಿ ಮತ್ತು ಭೂವಿಜ್ಞಾನ ಕಾಯಿದೆಗೆ ತಿದ್ದುಪಡಿ ತಂದು ಭೋವಿ ಸಮಾಜದವರಿಗೆ ಮಾತ್ರ ಅನುಮತಿಯನ್ನು ನೀಡಬೇಕು. ಕ್ರಷರ್ ಯೂನಿಟ್‍ಗಳನ್ನು ಆರಂಭಿಸಲು ಭೋವಿ ಸಮಾಜದವರಿಗೆ ಅತ್ಯಾಧುನಿಕ ಉಪಕರಣಗಳನ್ನು ಕೊಳ್ಳಲು ಆರ್ಥಿಕ ನೆರವು ನೀಡುವ ಯೋಜನೆಯನ್ನು ಆರಂಭಿಸಬೇಕು. ಇದರಿಂದ ಅವರಿಗೆ ಉದ್ಯೋಗ ಭದ್ರತೆ ಕಲ್ಪಿಸಿದಂತೆಯೂ ಆಗುತ್ತದೆ, ಬಂಡವಾಳಶಾಹಿಗಳ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದಂತೆಯೂ ಆಗುತ್ತದೆ. ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಭೋವಿ ಸಮಾಜದ ಮೇಲೆ ಕಿಂಚಿತ್ತಾದರೂ ಕಾಳಜಿಯಿದ್ದರೆ ಕಾಯಿದೆಗೆ ತಿದ್ದುಪಡಿ ತರಲಿ ಎಂದು ಬಸವರಾಜುರವರು ಸವಾಲು ಹಾಕಿದರು. ಇದನ್ನೂ ಓದಿ : SSLC ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್ – ಪರೀಕ್ಷಾ ದಿನಗಳಂದು ಉಚಿತ ಪ್ರಯಾಣಕ್ಕೆ KSRTC, BMTC ಅನುಮತಿ

ಎಎಪಿ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ಸದಂ ರವರು ಮಾತನಾಡಿ, ಕರ್ನಾಟಕದವರು ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶದ ಭೋವಿ ಸಮಾಜದ ಅನೇಕರು ಕೂಡ ರಾಜ್ಯದ ಗಣಿಗಾರಿಕೆ ಪ್ರದೇಶದಲ್ಲಿ ಸರಿಯಾದ ವೇತನವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಸಮರ್ಪಕ ರಕ್ಷಣಾ ಸೌಲಭ್ಯಗಳಿಲ್ಲದೇ ಅನೇಕರು ಕೆಲಸ ಮಾಡುತ್ತಿರುವಾಗಲೇ ಮೃತಪಟ್ಟಿದ್ದಾರೆ. ಅವರ ಈ ಸಮಸ್ಯೆಗಳನ್ನು ಬಗೆಹರಿಸಿ, ನ್ಯಾಯ ಕೊಡಿಸುವುದರಲ್ಲಿ ರಾಜ್ಯದ ಕಾರ್ಮಿಕ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

ಊಹೆಗೂ ನಿಲುಕದಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಬೇಬಿ ಬೆಟ್ಟದಲ್ಲಿ ವರ್ಷಕ್ಕೆ ಗರಿಷ್ಠ 25,000 ಮೆಟ್ರಿಕ್ ಟನ್ ಕಲ್ಲು ತೆಗೆಯಲು ಮಾತ್ರ ಪರಿಸರ ಅನುಮೋದನಾ ಸಮಿತಿ ಅನುಮತಿ ನೀಡಿದೆ. ಆದರೆ 2017ರಿಂದ ಪ್ರತಿವರ್ಷ ಲಕ್ಷಾಂತರ ಮೆಟ್ರಿಕ್ ಕಲ್ಲನ್ನು ತೆಗೆಲಾಗುತ್ತಿದೆ. ಇಲಾಖೆಯ ಇತ್ತೀಚಿನ ಮಾಹಿತಿ ಪ್ರಕಾರ ಬೇಬಿ ಬೆಟ್ಟವೊಂದರಲ್ಲೇ 280 ಕೋಟಿ ರೂ. ಹಾಗೂ ಮಂಡ್ಯ ಜಿಲ್ಲೆಯಲ್ಲಿ 320ಕೋಟಿ ರೂ. ದಂಡ ಹಾಕಲಾಗಿದೆ. ರಾಜ್ಯಾದ್ಯಂತ ದಂಡದ ಮೊತ್ತವು ಸಾವಿರಾರು ಕೋಟಿಯಷ್ಟಿದೆ. ದಂಡವನ್ನು ವಸೂಲಿ ಮಾಡಲು ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಜಗದೀಶ್ ಸದಂ ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಮುಖಂಡರಾದ ಪ್ರಕಾಶ್ ನಾಗರಾಜ್, ಉಷಾ ಮೋಹನ್, ಜ್ಯೋತಿಷ್ ಕುಮಾರ್ ಇನ್ನಿತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *