ಕಲಬುರಗಿ: ಬಂಗಾಳಕೊಳ್ಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಮೇಲೆ ವರುಣನ ಮುನಿಸು ಮತ್ತಷ್ಟು ಹೆಚ್ಚಾಗಿದೆ. ಕರ್ನಾಟಕ್ಕೆ ನೆರೆಯ ಮಹಾರಾಷ್ಟ್ರವೇ ಮತ್ತೊಮ್ಮೆ ಜಲಗಂಡಾಂತರ ತರ್ತಿದೆ.
ಹೌದು. ಮಹಾಮಳೆಯ ಹೊಡೆತಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ನಲುಗಿ ಹೋಗ್ತಿದೆ. ಕಳೆದ ಎರಡು ದಶಕಗಳಲ್ಲೇ ಎಂದೂ ಆಗದಂತಹ ಭೀಕರ ಮಳೆ ಈ ವರ್ಷ ಉತ್ತರ ಕರ್ನಾಟದಲ್ಲಾಗಿದೆ. ಸದ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗ್ತಿರೋ ಪರಿಣಾಮ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ರಣಪ್ರವಾಹ ಎದುರಾಗಿದೆ. ಕಲಬುರಗಿಯಲ್ಲಿ ಇದರ ಹೆಚ್ಚು ಎಫೆಕ್ಟ್ ಆಗಿದೆ. ಮಹಾರಾಷ್ಟ್ರದ ಉಜನಿ, ವೀರ್ ಡ್ಯಾಮ್‍ಗಳಿಂದ ಕ್ಷಣಕ್ಷಣಕ್ಕೂ ನೀರಿನ ಹರಿವು ಹೆಚ್ಚಾಗ್ತಿರೋದ್ರಿಂದ ಕಲಬುರಗಿಯ ಭೀಮಾನದಿ ಬೋರ್ಗರೆಯುತ್ತಿದೆ. ಭೀಮಾ ಒಡಲಿನಲ್ಲಿರುವ 148 ಗ್ರಾಮಗಳಿಗೆ ಮುಳುಗಡೆ ಭೀತಿ ಎದುರಾಗಿದೆ.
ಈಗಾಗಲೇ ಜೇವರ್ಗಿ, ಚಿತ್ತಾಪುರ, ಅಫ್ಜಲ್‍ಪುರ ಹಾಗೂ ಸೇಡಂ ತಾಲೂಕಿನ ಗ್ರಾಮಗಳು ಮುಳುಗಡೆಯಾಗಿವೆ. ನಂದರಗಿ, ದಿಕ್ಸಂಗಾ, ಬಂಕಲಗಾ, ಅಳ್ಳಗಿ ಗ್ರಾಮಗಳು ಜಲಾವೃತವಾಗಿವೆ. ನೂರಾರು ಮನೆಗಳಿಗೆ ನೀರು ನುಗ್ಗಿದೆ. ದಿಕ್ಸಂಗಾ ಗ್ರಾಮದಲ್ಲಿ ಐದು ಎತ್ತುಗಳು ಕೊಚ್ಚಿ ಹೋಗಿವೆ. ಚಿಂಚೋಳಿ ತಾಲೂಕಿನಲ್ಲಿ ಇಡೀ ರಾತ್ರಿ ವರ್ಷಧಾರೆಯಾಗಿದೆ. ನಾಗಾಇದಾಲಾಯಿ ಗ್ರಾಮದ ಕೆರೆ ಒಡೆದು ಗ್ರಾಮಕ್ಕೆ ನೀರು ನುಗ್ಗಿದೆ. ದವಸ-ಧಾನ್ಯ ಕಳೆದುಕೊಂಡು ಜನ ಹೈರಾಣಾಗಿದ್ದಾರೆ.
ಮನೆಯ ಛಾವಣಿ ಏರಿ ಕುಳಿತ ಜನ
ಹುಳ್ಸಗುಡ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಅಫ್ಜಲ್‍ಪುರದ ಜೇವಗಿ (ಬಿ) ಗ್ರಾಮಸ್ಥರು ಊರನ್ನೇ ಖಾಲಿ ಮಾಡ್ತಿದ್ದಾರೆ. ಚಿತ್ತಾಪುರದ ಕಡಬೂರ ಗ್ರಾಮದಲ್ಲಿ 8 ಅಡಿಗೂ ಅಧಿಕ ನೀರು ಸಂಗ್ರಹವಾಗಿದೆ. ಮನೆಯ ಛಾವಣಿ ಮೇಲೆ ಕುಳಿತು ಜನ ದಿನ ಕಳೀತಿದ್ದಾರೆ. ಅನ್ನಕ್ಕಾಗಿ ಪರದಾಡ್ತಿದ್ದಾರೆ. ಮುತ್ತಗಾ ಗ್ರಾಮ ದ್ವೀಪದಂತಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 4,819 ಮನೆಗಳಿಗೆ ನೀರು ನುಗ್ಗಿದೆ. 1058 ಮನೆಗಳಿಗೆ ಭೀಕರ ಹಾನಿಯಾಗಿದೆ. 518 ಜಾನುವಾರುಗಳ ಜೀವಹಾನಿಯಾಗಿದೆ.
ಮಳಖೇಡ ಉತ್ತರಾಧಿ ಮಠ ಸಂಪೂರ್ಣ ಮುಳುಗಡೆ!
ಕಾಗಿಣಾ ಆರ್ಭಟಕ್ಕೆ ಮಳಖೇಡದ ಉತ್ತರಾಧಿಮಠ ಬಹುತೇಕ ಮುಳೆಗಡೆಯಾಗಿದೆ. ಅರ್ಚಕರು ಹಾಗು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 16 ಮಂದಿ ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಗೋಶಾಲೆಯಲ್ಲಿದ್ದ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಸೇಡಂ-ಚಿತ್ತಾಪುರದ ಸಂಪರ್ಕ ಕಡಿತವಾಗಿದೆ.