ಮಸ್ಕಿ ಗೆಲ್ಲಲು ಬಿಎಸ್‍ವೈ ಸರ್ಕಾರದಿಂದ ಜಲಾಸ್ತ್ರ

Public TV
1 Min Read

ಬೆಂಗಳೂರು: ಬೆಳಗಾವಿ, ಬಸವಕಲ್ಯಾಣ ಗೆಲ್ಲಲು ಮರಾಠ ನಿಗಮದ ಅಸ್ತ್ರ ಪ್ರಯೋಗಿಸಿರುವ ರಾಜ್ಯ ಬಿಜೆಪಿ ಸರ್ಕಾರ, ಮಸ್ಕಿಯಲ್ಲಿ ಬೇರೆಯದ್ದೇ ತಂತ್ರ ಹೂಡಿದೆ. ಶಿರಾದಲ್ಲಿ ಪ್ರಯೋಗಿಸಿದ್ದ ಎರಡು ಅಸ್ತ್ರಗಳ ಪೈಕಿ, ಇಲ್ಲಿ ಒಂದನ್ನು ಪ್ರಯೋಗ ಮಾಡುತ್ತಿದೆ. ಶಿರಾದಲ್ಲಿ ಮದಲೂರು ಕೆರೆಗೆ ನೀರು ಹರಿಸುವ ಅಸ್ತ್ರ ಪ್ರಯೋಗ ಯಶಸ್ವಿಯಾದ ಕೂಡಲೇ, ಮಸ್ಕಿಯಲ್ಲಿ ನೀರಾವರಿ ಮಂತ್ರ ಜಪಿಸಿದೆ.

ಉಪಚುನಾವಣೆಗೆ ದಿನಾಂಕ ಘೋಷಣೆಗೆ ಮುನ್ನವೇ ಮಸ್ಕಿ ನಾಲಾ ಯೋಜನೆಯ ಆಧುನೀಕರಣ ಕಾಮಗಾರಿಗಳಿಗೆ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಬರೋಬ್ಬರಿ 52.54 ಕೋಟಿ ರೂಪಾಯಿ ಮೊತ್ತದ ಡಿಪಿಆರ್ ಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದೆ. ಈ ಮೂಲಕ ಮಸ್ಕಿ ಮತದಾರರನ್ನು ಓಲೈಸಿ ಉಪ ಚುನಾವಣೆ ಗೆಲ್ಲಲು ತಂತ್ರ ರೂಪಿಸಿದೆ.

ಮೊನ್ನೆಯಷ್ಟೇ ಮಸ್ಕಿಯಲ್ಲಿ ಪ್ರಚಾರ ನಡೆಸಿದ್ದ ಬಿಜೆಪಿ ಮುಖಂಡ ರವಿಕುಮಾರ್, ಎನ್‍ಆರ್‍ಬಿಸಿ 5ಎ ಕಾಲುವೆ ಅನುಷ್ಠಾನದ ಜೊತೆಗೆ ಕ್ಷೇತ್ರದ ಎಲ್ಲಾ ನೀರಾವರಿ ಯೋಜನೆಗಳಿಗೆ ಮಂಜೂರಾತಿ ಕೊಡಿಸುವ ಭರವಸೆ ನೀಡಿದರು. ಇದಾದ ಮೂರೇ ದಿನಕ್ಕೆ 52.54 ಕೋಟಿ ರೂಪಾಯಿ ಮೊತ್ತದ ಡಿಪಿಆರ್ ಗೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆದರೆ ಇದೆಲ್ಲಾ ಬೈ ಎಲೆಕ್ಷನ್ ಗಿಮಿಕ್ ಅಷ್ಟೇ. ಬಿಜೆಪಿಯವರನ್ನ ನಂಬಬೇಡಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

ಮಸ್ಕಿ ಗೆಲ್ಲಲು ಜಲಾಸ್ತ್ರ ಏಕೆ?: ಉಪ ಕಣದಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಅದಲು ಬದಲಾಗಿದ್ದಾರೆ. ಮೂರು ಬಾರಿ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್ ಈ ಬಾರಿ ಬಿಜೆಪಿ ಹುರಿಯಾಳು ಆಗಿದ್ದಾರೆ. ಇಷ್ಟು ದಿನ ಬಿಜೆಪಿಯಲ್ಲಿದ್ದ ಬಸನಗೌಡ ತುರುವಿಹಾಳ್ ಕಾಂಗ್ರೆಸ್‍ಗೆ ಜಂಪ್ ಆಗಿದ್ದಾರೆ. ಪ್ರತಾಪ್ ಗೌಡ ಪಾಟೀಲ್‍ಗೆ ಬಸನಗೌಡ ತುರುವಿಹಾಳ್ ಪ್ರಬಲ ಎದುರಾಳಿಯಾಗಿದ್ದು, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಇಬ್ಬರ ನಡುವಿನ ಅಂತರ ಕೇವಲ 213 ಮತಗಳಿತ್ತು.

ತುರುವಿಹಾಳ್ ಅನುಕಂಪದ ಅಲೆಯಲ್ಲಿ ಗೆಲ್ಲಬಹುದು ಎಂಬುದು ಬಿಜೆಪಿ ಭಯ. ಹೀಗಾಗಿಯೇ ಪ್ರತಾಪ್ ಗೌಡ ಗೆಲ್ಲಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಜಲಾಸ್ತ್ರ ಪ್ರಯೋಗಿಸಿದೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *