ಮಸ್ಕಿಯಲ್ಲಿ ಸಚಿವರ ದಂಡು – ಕಾಂಗ್ರೆಸ್ ಮುಕ್ತ ಗ್ರಾ.ಪಂಗಳ ನಿರ್ಮಾಣಕ್ಕೆ ಬಿಜೆಪಿ ಸಂಕಲ್ಪ

Public TV
2 Min Read

ರಾಯಚೂರು: ರಾಜ್ಯದಲ್ಲಿ ಶೇಕಡ 80 ರಷ್ಟು ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತರು ಆಯ್ಕೆಯಾಗಬೇಕು. ಹಳ್ಳಿಯಿಂದ ದಿಲ್ಲಿವರೆಗೆ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ಗ್ರಾಮಸ್ವರಾಜ್ಯ ಸಮಾವೇಶ ನಡೆಸಿದ್ದೇವೆ ಅಂತ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಜಿಲ್ಲೆಯ ಮಸ್ಕಿಯಲ್ಲಿ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸವದಿ ಉಪಚುನಾವಣೆಯ ದೃಷ್ಠಿಕೋನದಲ್ಲಿ ಇಂದು ಮಸ್ಕಿಯಲ್ಲಿ ಸಮಾವೇಶ ಮಾಡಿದ್ದೇವೆ ಎಂದರು.

ಸಿದ್ದರಾಮಯ್ಯ ಆಧಾರ ರಹಿತವಾಗಿ ಮಾತನಾಡುತ್ತಾರೆ. ಆದ್ರೆ ಮೋದಿ ಯಾವುದನ್ನು ಹೇಳುತ್ತಾರೊ ಅದನ್ನೇ ಮಾಡುತ್ತಾರೆ, ಕೊಟ್ಟ ಮಾತು ಉಳಿಸಿಕೊಳ್ಳುತ್ತಿದ್ದಾರೆ. ಮಸ್ಕಿ ಉಪಚುನಾವಣೆಗೂ ಮುನ್ನ ನೀರಾವರಿಯ ಎಲ್ಲಾ ಯೋಜನೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. 5 ಎ ಕಾಲುವೆ ಹೋರಾಟಗಾರರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಇಂದು ಅಥವಾ ನಾಳೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಹಿನ್ನೆಲೆ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಬಿಜೆಪಿಯು ಕಾರ್ಯಕರ್ತರಿಗೋಸ್ಕರ ನಾಯಕರನ್ನು ಬಳಸಿಕೊಳ್ಳುತ್ತಿದೆ. ಹಳ್ಳಿಯಲ್ಲಿರುವ ಕಾರ್ಯಕರ್ತರಿಗೆ ಅಧಿಕಾರ ಸಿಗಬೇಕು. ಅಭಿವೃದ್ಧಿ ಯೋಜನೆಗಳು ಎಲ್ಲರಿಗೂ ಸಿಗಬೇಕು ಎನ್ನುವ ಕಲ್ಪನೆಯಿಂದ ಗ್ರಾಮಸ್ವರಾಜ್ ಸಮಾವೇಶ ಮಾಡುತ್ತಿದ್ದೇವೆ. ಕಾರ್ಯಕರ್ತರ ಋಣ ನಮ್ಮ ಮೇಲಿದೆ, ಅದನ್ನು ತೀರಿಸಬೇಕಾಗಿದೆ ಎಂದರು.

ಡಿಸೆಂಬರ್ ಒಂದರಿಂದ ಭತ್ತ ಖರೀದಿ ಆರಂಭವಾಗುತ್ತದೆ. 50 ಕಾಲುವೆಯ ಚಾಲನೆಗೆ ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಪೂರಕ ತೀರ್ಮಾನ ತಗೆದುಕೊಳ್ಳಬೇಕಿದೆ. ಮಸ್ಕಿಯ ಬುದ್ದಿನ್ನಿ ಗ್ರಾಮದ ಶಾಲೆಗೆ ಉನ್ನತೀಕರಣ ಮಾಡಲಾಗುವುದು. ಮಸ್ಕಿ ಕ್ಷೇತ್ರದ 15 ಕೆರೆಗೆ ನೀರು ತುಂಬಿಸುವ ಕೆಲಸವಾಗಲು ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ. ರಾಮ (ಶ್ರೀರಾಮುಲು) ಲಕ್ಷ್ಮಣ( ಸವದಿ) ನಾವೆಲ್ಲ ಸೇರಿ ಮಸ್ಕಿ ಚುನಾವಣೆಯಲ್ಲಿ ಪ್ರತಾಪಗೌಡರನ್ನ ಗೆಲ್ಲಿಸುತ್ತೇವೆ, ಅವರು ಮಂತ್ರಿಯಾಗುತ್ತಾರೆ. ಬಸನಗೌಡ ತುರವಿಹಾಳ ಕಾಂಗ್ರೆಸ್ ಹೋಗಿದ್ದಾರೆ ಅಲ್ಲಿ ಏನು ಆಗುವುದಿಲ್ಲ, ಮತ್ತೆ ಅವರು ಮರಳಿ ಬರಲಿ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮಾತನಾಡಿ, ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯಿಲ್ಲ ಹೀಗಾಗಿ ನಮ್ಮ ನಮ್ಮಲ್ಲೆ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ದೇಶವನ್ನ ಕಾಂಗ್ರೆಸ್ ಮುಕ್ತ ಮಾಡುವುದು ನರೇಂದ್ರ ಮೋದಿ ಸಂಕಲ್ಪ. ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೆಸ್ ಮುಕ್ತವಾಗಬೇಕು. ಬಿಜೆಪಿ ಒಂದು ವ್ಯಕ್ತಿಯ ಮೇಲೆ ಇಲ್ಲ, ಪಕ್ಷದ ಮೇಲೆ ನಿಂತಿದೆ ಎಂದರು. ವಾಲ್ಮೀಕಿ ಸಮಾಜಕ್ಕೆ ಶೇ. 7.50 ರಷ್ಟು ಮಿಸಲಾತಿಗೆ ನಾನು ಪ್ರಯತ್ನಿಸುತ್ತೇನೆ. ಉಪಸಮಿತಿ ವರದಿಯ ನಂತರ ಮೀಸಲಾತಿ ಜಾರಿಯಾಗುತ್ತದೆ. ನಾನು ಕೊಟ್ಟ ಮಾತು ನಡೆಸಿ ಕೊಡದಿದ್ದರೆ ಅಧಿಕಾರ ಬಿಡುತ್ತೇನೆ. ನಾನು ಉಪಮುಖ್ಯಮಂತ್ರಿ ಯಾಗಬೇಕೆಂಬುದು ಜನರ ತುಂಬಾ ದಿನಗಳ ಬೇಡಿಕೆ. ಪಕ್ಷದ ವೇದಿಕೆಯಲ್ಲಿ ಅದನ್ನ ನಿರ್ಧರಿಸಲಾಗುವುದು ಅಂತ ಹೇಳಿದರು. ಮೊಳಕಲ್ಮೂರನ್ನು ಬಳ್ಳಾರಿ ಜಿಲ್ಲೆಗೆ ಸೇರಿಸುವ ಬಗ್ಗೆ ಹೋರಾಟಗಾರರು ಬೇಡಿಕೆ ಇಟ್ಟಿದ್ದಾರೆ ಈ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದರು.

ಅರಣ್ಯ ಖಾತೆ ಸಚಿವ ಆನಂದ್ ಸಿಂಗ್ ಸಮಾವೇಶಕ್ಕೂ ಮೊದಲು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಂಪ್ಲಿ ಬಳ್ಳಾರಿಗೆ ಸೇರಿಸಬೇಕು ಎಂಬ ಹೋರಾಟ ನಡೆದಿದೆ. ಎಲ್ಲರಿಗೂ ಹೋರಾಟ ಮೂಲಕ ಬೇಡಿಕೆ ಸಲ್ಲಿಸುವ ಹಕ್ಕಿದೆ. ಕಾನೂನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಕಂಪ್ಲಿ ಶಾಸಕ ಗಣೇಶ ತೊಡೆ ತಟ್ಟಿರುವ ಘಟನೆ ವಿಚಾರದ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಅಂತ ಸಚಿವ ಆನಂದ್ ಸಿಂಗ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *