ಮಳೆ ಹೆಚ್ಚಾದ್ರೆ ಸೂಕ್ಷ್ಮ ಪ್ರದೇಶದ ಸಾವಿರಾರು ಜನ ಕಾಳಜಿ ಕೇಂದ್ರಕ್ಕೆ ಶಿಫ್ಟ್- ಎಲ್ಲರಿಗೂ ವ್ಯಾಕ್ಸಿನ್

Public TV
2 Min Read

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಮಳೆ ಹೀಗೆ ಮುಂದುವರಿದಲ್ಲಿ ಜಿಲ್ಲೆಯಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ. ಒಂದೆಡೆ ಪ್ರವಾಹ, ಮತ್ತೊಂದೆಡೆ ಭೂಕುಸಿತದಂತಹ ಘಟನೆಗಳು ನಡೆಯಬಹುದು. ಹೀಗಾಗಿ ಜಿಲ್ಲಾಡಳಿತ ಪ್ರವಾಹ ಮತ್ತು ಭೂಕುಸಿತ ಎದುರಾಗುವಂತಹ ಪ್ರದೇಶಗಳ ಜನರನ್ನು ಸ್ಥಳಾಂತರ ಮಾಡುವುದಕ್ಕೆ ನಿರ್ಧರಿಸಿದೆ. ಅಷ್ಟೇ ಅಲ್ಲದೇ ಕಾಳಜಿ ಕೇಂದ್ರಗಳನ್ನು ತೆರೆದಿದ್ದು, ಸೂಕ್ಷ್ಮ ಪ್ರದೇಶದ ಸಾವಿರಾರು ಜನರಿಗೆ ವ್ಯಾಕ್ಸಿನ್ ಸಹ ಹಾಕಿಸಲು ತಯಾರಿ ನಡೆಸಿದೆ.

ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗುತ್ತಿದ್ದ ಪ್ರದೇಶಗಳು ಸೇರಿದಂತೆ ಈ ಬಾರಿ ಜಿಲ್ಲೆಯಲ್ಲಿ 77 ಗ್ರಾಮಗಳು ಪ್ರವಾಹ ಮತ್ತು ಭೂಕುಸಿತಕ್ಕೆ ನಲುಗುವ ಸಾಧ್ಯತೆ ಇದೆಯಂತೆ. ಇಷ್ಟು ಗ್ರಾಮಗಳ 2,800 ಮನೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಈಗಾಗಲೇ ಅಂದಾಜಿಸಿದೆ. ಹೀಗಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಅಷ್ಟೂ ಕುಟುಂಬಗಳಿಗೆ ಜಿಲ್ಲಾಡಳಿತ ಈಗಾಗಲೇ ನೋಟಿಸ್ ಜಾರಿ ಮಾಡಿದೆ. ದೂರದ ಸ್ಥಳಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದರೆ ಜನರು ಹೋಗಲು ಹಿಂದೇಟು ಹಾಕುತ್ತಾರೆ. ಜೊತೆಗೆ ಸ್ಥಳಾಂತರದ ಕೆಲಸವೂ ಕಷ್ಟಕರವಾಗುತ್ತದೆ. ಈ ಎಲ್ಲ ದೃಷ್ಟಿಯಿಂದ ಆಯಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.

ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟ ಮತ್ತು ನೆಹರು ನಗರದ ಒಟ್ಟು 66 ಕುಟುಂಬಗಳ ಜನರನ್ನು ಸ್ಥಳಾಂತರ ಮಾಡಬೇಕಾಗಿದ್ದು, ಅವರಿಗೂ ವಿರಾಜಪೇಟೆ ಪಟ್ಟಣ ಪಂಚಾಯಿತಿಯಿಂದ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತಿದೆ. ಮಳೆ ಅರ್ಭಟ ಹೆಚ್ಚಾದರೆ ಸ್ಥಳೀಯ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆಗೆಯಲು ಪಟ್ಟಣ ಪಂಚಾಯತಿಯ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

ಮಡಿಕೇರಿ ನಗರಸಭೆ ಸಹ ಕಾಳಜಿ ಕೇಂದ್ರ ತೆರೆಯಲು ಈಗಾಗಲೇ ಸ್ಥಳ ಗುರುತು ಮಾಡಿದೆ. ನಗರದ ಇಂದಿರಾ ನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ ಮತ್ತು ಮಲ್ಲಿಕಾರ್ಜುನ ನಗರ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಈ ಬಾರಿ ಮಳೆಯಿಂದ ಸಾಕಷ್ಟು ಸಮಸ್ಯೆ ಅಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈಗಾಗಲೇ ಕಾಳಜಿ ಕೇಂದ್ರಗಳನ್ನು ತೆರೆಯಲು ನಗರದ ಅಂಬೇಡ್ಕರ್ ಭವನ ನಗರದ ಸಭೆಯ ಶಾಲೆ ಕಾಲೇಜಿನ ಹಾಸ್ಟೆಲ್ ಗಳನ್ನು ಗುರುತು ಮಾಡಿದೆ. ಕಾಳಜಿ ಕೇಂದ್ರಕ್ಕೆ ಬರುವವರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *