ಮಳೆ ಅನಾಹುತ – ತುರ್ತಾಗಿ 50 ಕೋಟಿ ರೂ. ಬಿಡುಗಡೆಗೆ ಸಿಎಂ ಸೂಚನೆ

Public TV
1 Min Read

ಬೆಂಗಳೂರು: ರಾಜ್ಯಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

ಕರ್ನಾಟಕದಲ್ಲಿ ಭಾರೀ ಮಳೆ ಆಗುತ್ತಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಆದ್ದರಿಂದ ಆಸ್ಪತ್ರೆಯಲ್ಲಿದ್ದರೂ ಸಿಎಂ ಯಡಿಯೂರಪ್ಪ ಎಲ್ಲಾ ಡಿಸಿಗಳಿಂದ ಮಾಹಿತಿ ಪಡೆದು, ಅವಾಂತರ ತಡೆಗೆ ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೇ ಮಳೆ ಅನಾಹುತ ತಡೆಯಲು ತುರ್ತಾಗಿ 50 ಕೋಟಿ ರೂಪಾಯಿ ಬಿಡುಗಡೆ ಮಾಡಲು ಮುಖ್ಯಕಾರ್ಯದರ್ಶಿಗೆ ಸಿಎಂ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ರಾಜ್ಯಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಮಳೆ ಬಗ್ಗೆ ಕ್ಷಣಕ್ಷಣದ ಮಾಹಿತಿ ತೆಗೆದುಕೊಳ್ಳುವುದು ಸೇರಿದಂತೆ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರಲು ಸೂಚನೆ ನೀಡಿದ್ದಾರೆ.

“ತುರ್ತು ಸಂದರ್ಭಕ್ಕಾಗಿ ಕೂಡಲೇ 50 ಕೋಟಿ ರೂ. ಹಣವನ್ನು ಬಿಡುಗಡೆಗೊಳಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೆಲ ಜಿಲ್ಲಾಧಿಕಾರಿಗಳ ಜೊತೆ ಫೋನ್ ಮುಖಾಂತರ ಸಂಪರ್ಕ ಮಾಡಿದ ಮುಖ್ಯಮಂತ್ರಿಗಳು ಮಳೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ” ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಲಾಗಿದೆ.

ಇನ್ನೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಇಂದು ಕರೆ ಮಾಡಿದ ಸಿಎಂ, ಮೂಡಿಗೆರೆ ತಾಲೂಕಿನ ಕೆಂಬತ್ಮಕ್ಕಿಯಲ್ಲಿ ಮಳೆಯಿಂದ ಹಾನಿಗೀಡಾದ 5 ಎಕರೆ ಬಾಳೆ ತೋಟವನ್ನು ಖುದ್ದು ವೀಕ್ಷಣೆ ಮಾಡಿ ಪರಿಹಾರ ನೀಡಲು ಸೂಚನೆ ನೀಡಿದ್ದಾರೆ.

ಚಾರ್ಮಾಡಿ ಘಾಟ್‍ನಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ಕೆಆರ್‌ಎಸ್ ಒಳಹರಿವು ಹೆಚ್ಚಾಗಿದೆ. ಇತ್ತ ಹಾಸನದ ಯಗಚಿ ಮತ್ತು ವಾಟೆ ಹೊಳೆ ಜಲಾಶಯ ಭರ್ತಿ ಆಗಿದ್ದು, ನೀರನ್ನು ಹೊರಬಿಡಲಾಗುತ್ತಿದೆ. ಇನ್ನೂ ಹೇಮಾವತಿ ನದಿಯಲ್ಲಿ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ.

ಕಬಿನಿ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಮೈಸೂರಿನ ನಂಜನಗೂಡಿನಲ್ಲಿ ಕಪಿಲಾ ನದಿ ಮೈತುಂಬಿ ಹರಿಯುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಆಗಸ್ಟ್ 10ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *