ಮಳೆಯಿಂದ ಮಿನಿ ಮಲೆನಾಡಿನಂತಾದ ಸನ್ ಸಿಟಿ ಕಲಬುರಗಿ

Public TV
2 Min Read

ಕಲಬುರಗಿ: ತೊಗರಿ ಕಣಜ ಬಿಸಿಲನಾಡು ಖ್ಯಾತಿಯ ಕಲಬುರಗಿ ಇದೀಗ ಅಕ್ಷರಶಃ ಮಲೆನಾಡಿನಂತೆ ಬದಲಾಗಿದೆ. ಸೂರ್ಯ ಕಾಣದಂತೆ ಎಲ್ಲಡೆ ಆವರಿಸಿರುವ ಮೋಡಗಳು, ನಿರಂತರವಾಗಿ ಸುರಿಯುತ್ತಿರುವ ಮಳೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಬೆಳೆದಿರುವ ಹಸಿರ ಸಿರಿ ಜಿಲ್ಲೆಯ ಜನರಿಗೆ ಅಕ್ಷರಶಃ ಮಲೆನಾಡಿನ ಅನುಭೂತಿಯನ್ನು ನೀಡುತ್ತಿದೆ. ಕಲಬುರಗಿ ಅಂದಾಕ್ಷಣ ಥಟ್ಟನೆ ನೆನಪು ಆಗುತ್ತಿದ್ದುದು ಬಿಸಿಲು, ಬಿಸಿಲನಾಡು ಎಂದು. ಕಲಬುರಗಿ ನೀರು, ನೆರಳಿಲ್ಲದ ಊರು ಎಂದು ಹೆಚ್ಚಿನ ಜನರು ಅಂದುಕೊಂಡು, ಆ ಕಡೆಗೆ ಹೊರಡಲು ಹಿಂದೇಟು ಹಾಕುವುದು ಇದೆ. ಅದು ನಿಜವೂ ಹೌದು. ರಾಜ್ಯದಲ್ಲಿ ಅತಿ ಹೆಚ್ಚು ಬಿಸಿಲು ದಾಖಲಾಗುವ ಜಿಲ್ಲೆ ಕಲಬುರಗಿಯೇ ಆಗಿದೆ. ಆದರೆ ಇದೇ ಜಿಲ್ಲೆ ಇದೀಗ ಮಲೆನಾಡಿನಂತೆ ಕಂಗೊಳಿಸುತ್ತಲೂ ಇದೆ.

ಕಲಬುರಗಿ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಹೆಚ್ಚಿನ ಮಳೆಯಾಗುತ್ತಿದೆ. ಅದರಲ್ಲೂ ಜುಲೈ ಮೊದಲ ವಾರದಿಂದ ಜಿಲ್ಲೆಯ ವಾತಾವರಣವೇ ಬದಲಾಗಿ ಹೋಗಿದೆ. ಮೊದಲು ಮುಂಜಾನೆಯಾದರೆ ಸಾಕು, ಸೂರ್ಯನ ಕಿರಣಗಳು ನೆತ್ತಿ ಸುಡುತಿದ್ದವು. ಆದರೆ ಇದೀಗ ಮೋಡ ಕವಿದ ವಾತಾವರಣದಿಂದ ಕಳೆದ ಅನೇಕ ದಿನಗಳಿಂದ ಜಿಲ್ಲೆಯ ಜನರಿಗೆ ಸೂರ್ಯನ ದರ್ಶನವೇ ಆಗಿಲ್ಲ.

ಒಂದೆಡೆ ಮೋಡ ಕವಿದ ವಾತಾವರಣ ಮತ್ತೊಂದೆಡೆ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ. ಬಿಸಿಲನಾಡಿನ ಜನರಿಗೆ ವಿಶಿಷ್ಟ ಅನುಭವ ನೀಡುತ್ತಿವೆ. ಅನೇಕರು ಮಳೆಗಾಲದಲ್ಲಿ ಮಳೆಯ ಮಜಾ ಸವಿಯಲು ಮಲೆನಾಡಿಗೆ ಹೋಗುತ್ತಿದ್ದರು. ಆದರೆ ಇದೀಗ ಜಿಲ್ಲೆಯಲ್ಲಿಯೇ ಮಲೆನಾಡಿನ ಅನುಭವ ಜನರಿಗೆ ಆಗುತ್ತಿದೆ. ಹೀಗಾಗಿ ಹೆಚ್ಚಿನ ಜನರು ಮಳೆಯ ಆನಂದವನ್ನು ಸವಿಯುತ್ತಿದ್ದಾರೆ. ಒಂದೆಡೆ ಜಿಲ್ಲೆಯಲ್ಲಿ ಮಳೆಯಿಂದಾಗಿ ಮಲೆನಾಡಾದರೆ ಮತ್ತೊಂದೆಡೆ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶ ಇದೀಗ ಹಸಿರ ಸೀರೆಯನ್ನುಟ್ಟು ಕಂಗೊಳಿಸುತ್ತಿದ್ದು, ಮನಸಿಗೆ ಮುದ ನೀಡುತ್ತಿದೆ.

ಕಲಬುರಗಿ ಜಿಲ್ಲೆಯಲ್ಲಿ ಕೂಡ ಹಸಿರ ಸಿರಿ ಇದೆ. ಪುಟ್ಟ ಪುಟ್ಟ ಜಲಪಾತಗಳಿವೆ. ಅನೇಕ ಕಾಡು ಪ್ರಾಣಿಗಳಿವೆ. ಹಸಿರ ಚೆಲುವನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನಸಿಗೆ ಆನಂದ. ಹೀಗಾಗಿ ನಮಗೆ ಮಡಿಕೇರಿ, ಮಲೆನಾಡಿಗಿಂತ ನಮ್ಮೂರ ಮಲೆನಾಡೇ ಚಂದ ಅಂತಾರೆ ಕಲಬುರಗಿ ಜಿಲ್ಲೆಯ ಜನ.

ಅಷ್ಟಕ್ಕೂ ಬಿಸಿಲನಾಡು ಕಲಬುರಗಿ ಜಿಲ್ಲೆಯಲ್ಲಿ ಮಲೆನಾಡಿನಂತೆ ಕಂಗೊಳಿಸುವ ಸೊಬಗು ಇರುವುದು ಚಿಂಚೋಳಿ ತಾಲೂಕಿನಲ್ಲಿ. ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಣ ಅರಣ್ಯ ಪ್ರದೇಶ, ಜಿಲ್ಲೆಯಲ್ಲಿರುವ ಹಸಿರ ಸಿರಿಯಾಗಿದೆ. ಚಿಂಚೋಳಿಯ ಕುಂಚಾವರಂ ಅರಣ್ಯ ಪ್ರದೇಶ ಬರೋಬ್ಬರಿ ಹದಿನಾಲ್ಕು ಸಾವಿರದ ಒಂಬೈನೂರಾ ಐವತ್ತೆಂಟು ಹೆಕ್ಟರ್ ಪ್ರದೇಶದ ವ್ಯಾಪ್ತಿಯಲ್ಲಿ ಇದೆ. ಇದನ್ನು 2011 ರಲ್ಲಿ ಸಂರಕ್ಷಿತ ವನ್ಯಜೀವಿಧಾಮ ಅಂತ ಕೂಡ ಘೋಷಿಸಲಾಗಿದೆ.

ಬೇಸಿಗೆಯಲ್ಲಿ ಬೋಳಾಗಿ ಕಾಣುವ ಕುಂಚಾವರಂ ಅರಣ್ಯ, ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಸಮುದ್ರದಲ್ಲಿನ ಚಿಪ್ಪು ಅರಳಿದಂತೆ ಹಸಿರ ಸಿರಿಯನ್ನು ಹೊತ್ತು ಅರಳುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕೂಡಾ ಉತ್ತಮವಾಗಿ ಆಗುತ್ತಿದ್ದು, ಜಿಲ್ಲೆಯ ಮಳೆಗೆ ಕುಂಚಾವರಂ ಅರಣ್ಯ ಪ್ರದೇಶ ಇದೀಗ ಅಕ್ಷರಶ ಮಲೆನಾಡಿನಂತೆ ಕಾಣುತ್ತಿದೆ. ಇದನ್ನೂ ಓದಿ: ಮೂರು ದಶಕಗಳಿಂದ ದುರಸ್ಥಿಯಾಗದ ರಸ್ತೆ- ಗಿಡ ನೆಟ್ಟು ಆಕ್ರೋಶ

ಚಾರಣಕ್ಕು ಸೈ ಸದ್ಯ ಹಚ್ಚ ಹಸಿರಿನಿಂದ ಕಂಗೋಳಿಸುತ್ತಿರುವ ಕಿಂಚಾವರಂ ಅರಣ್ಯದಲ್ಲಿ ನೂರಾರು ಚಾರಣ ಪ್ರೀಯರು ಆಗಮಿಸುತ್ತಿದ್ದಾರೆ. ಇನ್ನು ಹೀಗೆ ಚಾರಣ ಮುಗಿಸಿ ಬಂದ ಜನ ಅರಣ್ಯ ಪ್ರದೇಶದ ಸೋಬಗಿಗೆ ಫಿದಾ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *