ಮಳೆಗಾಲ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸನ್ನದ್ಧ- NDRF ಜೊತೆ ತರಬೇತಿ ಪಡೆದ ತಂಡ ರೆಡಿ

Public TV
2 Min Read

ಚಿಕ್ಕಮಗಳೂರು: ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಮಲೆನಾಡು ಭಾಗದಲ್ಲಿ ಸಾವು-ನೋವು, ಕಷ್ಟ-ನಷ್ಟ ಸಂಭವಿಸಿತ್ತು. ಹೀಗಾಗಿ ಜಿಲ್ಲಾಡಳಿತ ಜಡಿ ಮಳೆಯ ಆರಂಭಕ್ಕೂ ಮುನ್ನವೇ ಮಳೆಗಾಲವನ್ನು ಎದುರಿಸಲು ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ. ಈಗಾಗಲೇ ಜಿಲ್ಲೆಯ ಆರೋಗ್ಯ, ಮೆಸ್ಕಾಂ, ಲೋಕೋಪಯೋಗಿ, ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕಳೆದ ಎರಡು ವರ್ಷದಂತೆ ಭಾರೀ ಮಳೆ ಸುರಿದರೆ ಯಾವ ರೀತಿ ವಿಪತ್ತು ನಿರ್ವಹಣೆ ಮಾಡಬೇಕೆಂದು ಸಿದ್ಧತೆ ನಡೆಸಿದೆ.

ಜಿಲ್ಲಾಡಳಿತ ಈಗಾಗಲೇ ಪ್ರವಾಹ, ಬೆಟ್ಟಗುಡ್ಡ ಕುಸಿತ, ನೀರು ಕೊಚ್ಚಿ ಹೋಗುವ ಜಾಗ, ಲೋ ಲೈನ್ ಏರಿಯಾ, ಸಂಕಷ್ಟಕ್ಕೀಡಾಗುವ ಗ್ರಾಮಗಳು ಸೇರಿದಂತೆ ಸಮಸ್ಯೆಯಾಗುವ ಜಾಗವನ್ನು ಪಟ್ಟಿ ಮಾಡಿ, ವರುಣನ ಅಬ್ಬರವನ್ನು ಎದುರಿಸಲು ರೂಪುರೇಷೆಯನ್ನು ಸಿದ್ಧಪಡಿಸಿಕೊಂಡಿದೆ. ಅದೇ ರೀತಿ ಮಳೆ ವಿಪತ್ತನ್ನು ನಿರ್ವಹಿಸಲು ಭೂಕುಸಿತವಾಗುವ 108 ಗ್ರಾಮಗಳು ಹಾಗೂ ಪ್ರವಾಹ ಉಂಟಾಗಬಹುದಾದ 40 ಏರಿಯಾಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಜೊತೆಗೆ ಭಾರೀ ಮಳೆ ಸುರಿದರೆ ಬೆಟ್ಟ-ಗುಡ್ಡ ಕುಸಿಯುವ 58 ಪ್ರದೇಶಗಳನ್ನೂ ಪಟ್ಟಿ ಮಾಡಿದ್ದಾರೆ. ತಜ್ಞರು ಕೂಡ ಬೆಟ್ಟಗುಡ್ಡ ಕುಸಿಯೋ ಜಾಗ ಹಾಗೂ ಪ್ರವಾಹ ಬರಬಹುದಾದ ಜಾಗದ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಳೆದ ಎರಡು ವರ್ಷದ ಮಳೆಗಾಲದಲ್ಲಿ ಆದ ಸಮಸ್ಯೆ ಈ ಬಾರಿ ಆಗಬಾರದು ಎಂದು ಜಿಲ್ಲಾಡಳಿತ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜಿಲ್ಲಾಡಳಿತದ ಜೊತೆ ಸ್ಥಳಿಯರು ಕೈಜೋಡಿಸಿದ್ದು, 463 ಸ್ವಯಂ ಸೇವಕರು, 290 ಹೋಮ್ ಗಾಡ್ರ್ಸ್, 70 ಈಜು ತಜ್ಞರು, 16 ಎನ್‍ಜಿಓ ತಂಡ, ಹೋಬಳಿ ಮಟ್ಟದಲ್ಲಿ ರಿಲೀಫ್ ಟೀಮ್, 62 ಸೇಫ್ ಸೆಂಟರ್ ಗಳು ಮಳೆ ಎದುರಿಸಲು ಸಜ್ಜಾಗಿವೆ.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇರುವ ಹಿಟಾಚಿ, ಜೆಸಿಬಿ, ಟ್ರ್ಯಾಕ್ಟರ್, ಟ್ರಿಲ್ಲರ್, ಟಿಪ್ಪರ್ ಎಲ್ಲವುದರ ಮಾಹಿತಿಯನ್ನು ಜಿಲ್ಲಾಡಳಿತ ಪಡೆದುಕೊಂಡಿದೆ. ಮಳೆ ಹೆಚ್ಚಾಗಿ ವಿಪತ್ತು ಉಂಟಾದರೆ ಜಿಲ್ಲಾಡಳಿತದ ಜೊತೆ ಕೈಜೋಡಿಸುವಂತೆ ಸೂಚನೆ ನೀಡಲಾಗಿದೆ. ವಿಪತ್ತು ನಿರ್ವಹಣಾ ತಂಡವು ಎನ್‍ಡಿಆರ್‍ಎಫ್ ತಂಡದಿಂದ ತರಬೇತಿ ಪಡೆದಿದೆ. ಮಲೆನಾಡಿನ ಪ್ರತಿ ಹಳ್ಳಿಯಲ್ಲೂ ತರಬೇತಿ ಪಡೆದ ಸ್ವಯಂ ಸೇವರು ಮಳೆ ವಿಪತ್ತನ್ನ ಎದುರಿಸಲು ರೆಡಿಯಾಗಿದ್ದಾರೆ.

ಈ ವರ್ಷದ ಮುಂಗಾರು ಕೂಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಆಶಾದಾಯಕವಾಗಿ ಆರಂಭಗೊಂಡಿದ್ದು, ಜಿಲ್ಲೆಯ ಜನರಿಗೆ ಮಳೆಗಾಲದ ಮಳೆ ಬಗ್ಗೆ ಆತಂಕ ಉಂಟಾಗಿದೆ. ಆಕಾಶದಲ್ಲಿ ಮೋಡ ಕಡುಗಟ್ಟುತ್ತಿದ್ದರೆ, ಮಲೆನಾಡಿಗರ ಮನದಲ್ಲಿ ಭಯ ಹುಟ್ಟುತ್ತಿದೆ. ಕಳೆದ ಎರಡು ವರ್ಷಗಳ ಮಳೆ ಅಬ್ಬರ ಅರ್ಧ ಮಲೆನಾಡನ್ನು ಹಿಂಡಿ ಹಿಪ್ಪೆಮಾಡಿತ್ತು. ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿತ್ತು. ವರುಣನ ಅಬ್ಬರಕ್ಕೆ ಬೆಟ್ಟ-ಗುಡ್ಡಗಳೇ ಕಳಚಿ ಬಿದ್ದಿದ್ದವು. ಮನೆ-ಮಠಗಳು ಕೊಚ್ಚಿ ಹೋಗಿ, ಜೀವಗಳು ನೀರಲ್ಲಿ ತೇಲಿ ಹೋಗಿದ್ದವು. ನದಿಗಳು ಊರು, ಗದ್ದೆ, ತೋಟ ಯಾವುದನ್ನೂ ಲೆಕ್ಕಿಸದೆ ಮನಸೋ ಇಚ್ಛೆ ಹರಿದು ಪ್ರವಾಹದ ರೂಪ ತಾಳಿದ್ದನ್ನು ಮಲೆನಾಡಿಗರು ಮರೆತಿಲ್ಲ. ಹೀಗಾಗಿ ಎಚ್ಚರಿಕೆ ವಹಿಸಿದ್ದಾರೆ.

ಈ ವರ್ಷದ ಆರಂಭದ ಮಳೆಯೂ ಪ್ರವಾಹದ ಮೂನ್ಸೂಚನೆ ನೀಡಿರುವುದು ಜಿಲ್ಲಾಡಳಿತ ಹಾಗೂ ಮಲೆನಾಡಿಗರಿಗೆ ಮತ್ತದೇ ಆತಂಕ ತಂದಿದೆ. ಈ ಬಾರಿ ಜಿಲ್ಲಾಡಳಿತ ವರುಣದೇವನಿಗೂ ಸೆಡ್ಡು ಹೊಡೆದು, ಹೈ ಅಲರ್ಟ್ ಘೋಷಿಸಿದೆ.

Share This Article
Leave a Comment

Leave a Reply

Your email address will not be published. Required fields are marked *