ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಗುರುಮೂರ್ತಿ ಅಧಿಕಾರ ಸ್ವೀಕಾರ

Public TV
1 Min Read

ಶಿವಮೊಗ್ಗ: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸಿ.ಎಂ.ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಕೆ.ಎಸ್.ಗುರುಮೂರ್ತಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಅಧಿಕಾರ ಸ್ವೀಕಾರ ಹಿನ್ನೆಲೆಯಲ್ಲಿ ಕಚೇರಿಗೆ ಆಗಮಿಸಿದ ಅವರು, ಪೂಜೆ ನೆರವೇರಿಸಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಸಿ.ಎಂ.ಯಡಿಯೂರಪ್ಪ ಪುತ್ರಿ ಅರುಣಾದೇವಿ, ಶಾಸಕರಾದ ರುದ್ರೇಗೌಡ, ಹಾಲಪ್ಪ ಅವರು ಉಪಸ್ಥಿತರಿದ್ದರು.

ಅಧಿಕಾರ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಅಧಿಕಾರ ನೀಡಿರುವುದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದಿಸಿದರು. ಪರಿಸರ ಉಳಿಸಿಕೊಂಡು ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಹಿರಿಯರ ಆಶೀರ್ವಾದದಿಂದ ಈ ಸ್ಥಾನ ಲಭಿಸಿದೆ. ಹಿರಿಯರ ಮಾರ್ಗದರ್ಶನದಲ್ಲಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತೇನೆ. ಎಲ್ಲರ ಸಹಕಾರವನ್ನು ಪಡೆಯುತ್ತೇನೆ ಎಂದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ವ್ಯಾಪ್ತಿ ದೊಡ್ಡದಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಕೊರೊನಾ ಬಿಕ್ಕಟ್ಟಿನಿಂದಾಗಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯವರೇ ಆಗಿದ್ದು, ಅವರೊಂದಿಗೆ ಮಾತನಾಡಿ, ಹೆಚ್ಚಿನ ಅನುದಾನ ತರುವ ಪ್ರಯತ್ನ ಮಾಡುತ್ತೇನೆ. ಪರಿಸರ ಹೋರಾಟದಿಂದ ಬಂದವನಾಗಿದ್ದು, ಮರಗಳ ಸಂರಕ್ಷಣೆ, ಗಿಡ ನೆಡುವ ಕಾರ್ಯಕ್ಕೆ ಒತ್ತು ನೀಡಲಾಗುವುದು, ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು. ಇದಕ್ಕಾಗಿ ತಜ್ಞರು, ಹಿರಿಯರ ಸಲಹೆ ಪಡೆಯುತ್ತೇನೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *