ಮಲೆನಾಡಲ್ಲಿ ರಸ್ತೆ ಇಲ್ಲದೆ ಮೃತದೇಹವನ್ನ ಮರದ ಕೊಂಬೆಗೆ ಕಟ್ಟಿ ಸಾಗಿಸಿದ್ರು!

Public TV
1 Min Read

ಚಿಕ್ಕಮಗಳೂರು: ರಸ್ತೆ ಇಲ್ಲದೆ ಕಾಡು ಮನುಷ್ಯರಂತೆ ಮೃತದೇಹವನ್ನ ಮರದ ಕೊಂಬೆಗೆ ಕಟ್ಟಿಕೊಂಡು ಕಾಡಿನ ದಾರಿಯಲ್ಲಿ ಎರಡು ಕಿ.ಮೀ. ನಡೆದೇ ಹೋಗಿರೋ ಹೃದಯಾವಿದ್ರಾವಕ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಮನುಕುಬ್ರಿ ಗ್ರಾಮದಲ್ಲಿ ಈ ಕರುಣಾಜನಕ ಘಟನೆ ನಡೆದಿದೆ. ಕಳಸ ಸಮೀಪದ ಕಳಕೋಡು ಮೇಗಲಮಕ್ಕಿ ಸಮೀಪದ ಮನುಕುಬ್ರಿ ಗ್ರಾಮ ಗಿರಿಜನರೇ ವಾಸಿಸುವ ಕುಗ್ರಾಮ. ಈ ಗ್ರಾಮದ 50 ವರ್ಷದ ಶಾರದಮ್ಮ ಮೃತರಾಗಿದ್ದು, ಅವರನ್ನ ಗ್ರಾಮಕ್ಕೆ ತರಲು ರಸ್ತೆ ಇಲ್ಲದೆ ಕಾಡು ದಾರಿಯಲ್ಲಿ ಮರದ ಟೊಂಗೆಗೆ ಕಟ್ಟಿಕೊಂಡು ಕಾಡಿನ ಕಾಲು ದಾರಿಯಲ್ಲಿ ಸಾಗಿ ಗ್ರಾಮ ತಲುಪಿದ್ದಾರೆ. ಶಾರದಮ್ಮರ ಆರೋಗ್ಯ ತೀರಾ ಹದಗೆಟ್ಟಾಗ ಕೂಡ ಇದೇ ರೀತಿ ಕೊಂಬೆಗೆ ಕಟ್ಟಿಕೊಂಡೇ ಆಸ್ಪತ್ರೆಗೆ ಸಾಗಿಸಿದ್ರು. ಇಂದು ಅವರು ತೀರಿಕೊಂಡ ಬಳಿಕ ದಾರಿ ಇಲ್ಲದೆ ಅದೇ ರೀತಿ ಮತ್ತೆ ಗ್ರಾಮಕ್ಕೆ ಮೃತದೇಹವನ್ನ ವಾಪಸ್ ತಂದಿದ್ದಾರೆ.

ಗ್ರಾಮದ ರಸ್ತೆ ಬೇಡಿಕೆ ಇಟ್ಟು ದಶಕಗಳೇ ಕಳೆದಿವೆ. ಗ್ರಾಮಸ್ಥರು ನೂರಾರು ಮನವಿ ಮಾಡಿದ್ದಾರೆ. ಆದರೆ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಇವರ ಮನವಿಗೆ ಸ್ಪಂದಿಸಿಲ್ಲ. ಮನವಿ ಕೊಟ್ಟು-ಕೊಟ್ಟು ಸಾಕಾಗಿ ಇಂದು ಇಲ್ಲಿನ ಜನ ರಸ್ತೆ ಕೇಳುವುದನ್ನೇ ಕೈಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಈ ರೀತಿಯದ್ದು ಇದೊಂದೆ ಪ್ರಕರಣವಲ್ಲ. ಮೂಡಿಗೆರೆ ತಾಲೂಕಿನ ಹೊಳೆಕೂಡಿಗೆ ಗ್ರಾಮದಲ್ಲೂ ಕೂಡ ಕಳೆದ ಒಂದೆರಡು ವರ್ಷಗಳಲ್ಲಿ ಇದೇ ರೀತಿ ಘಟನೆ ನಡೆದಿತ್ತು.

ಹೊಳೆಕೂಡಿಗೆ ಗ್ರಾಮದ ವೃದ್ಧನೋರ್ವ ಸಾವನ್ನಪ್ಪಿದ್ದಾಗ ಗ್ರಾಮಸ್ಥರು ರಸ್ತೆ ಇಲ್ದೆ ಅಪಾಯದ ಮಟ್ಟ ಮೀರಿ ಮೈದುಂಬಿ ಹರಿಯೋ ಭದ್ರಾ ನದಿ ಮೇಲೆಯೇ ತೆಪ್ಪದಲ್ಲಿ ಮೃತದೇಹವನ್ನ ಸಾಗಿಸಿದ್ರು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ಗ್ರಾಮಸ್ಥರಿಗೆ ರಸ್ತೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಇಂದಿಗೂ ಅಲ್ಲಿನ ಜನ ಬದುಕಿಗಾಗಿ ತೆಪ್ಪವನ್ನೇ ಆಶ್ರಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *