ಮಲೆನಾಡಲ್ಲಿ ಮಳೆ ಅಬ್ಬರ- ಹೆಚ್ಚುತ್ತಲಿದೆ ಜನಸಾಮಾನ್ಯರ ಆತಂಕ

Public TV
1 Min Read

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಳೆದ ರಾತ್ರಿ ಮತ್ತು ಇಂದು ಬೆಳಗ್ಗೆ ಸುರಿದ ದೈತ್ಯ ಮಳೆಗೆ ಮಲೆನಾಡಿಗರು ಕಂಗಾಲಾಗಿದ್ದಾರೆ.

ಕಳೆದ ವರ್ಷದ ಮಳೆಯಿಂದಾದ ಅನಾಹುತ ಸಾವು-ನೋವಿನಿಂದ ಜನ ಹೊರಬರುವ ಮುನ್ನವೇ ಮತ್ತೆ ಮಳೆರಾಯ ತನ್ನ ಆರ್ಭಟವನ್ನ ಅನಾವರಣಗೊಳಿಸಿದ್ದಾನೆ. ಮಳೆಯ ಅಬ್ಬರ ಕಂಡು ಮಲೆನಾಡಿಗರು ಮತ್ತೊಮ್ಮೆ ಒಂದೇ ಜೀವಿತಾವಧಿಯಲ್ಲಿ ಮೂರನೇ ಬಾರಿ ಹೊಸ ಬದುಕು ಕಟ್ಟಿಕೊಳ್ಳಬೇಕಾ ಎಂಬ ಆತಂಕಕ್ಕೀಡಾಗಿದ್ದಾರೆ. ಭಾನುವಾರ ರಾತ್ರಿ ಹಾಗೂ ಇಂದು ಬಿರುಗಾಳಿ, ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆ ಮಲೆನಾಡಿಗರ ನಿದ್ದೆಗೆಡಿಸಿದೆ.

ಜಿಲ್ಲೆಯ ಮಲೆನಾಡು ಭಾಗಗಳಾದ ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್.ಆರ್.ಪುರ, ಕಳಸ, ಬಾಳೆಹೊನ್ನೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನ ಸುತ್ತಮುತ್ತ, ಬಣಕಲ್, ಬಾಳೂರು, ಕೊಟ್ಟಿಗೆಹಾರ, ಚಕ್ಕಮಕ್ಕಿ, ಮತ್ತಿಕಟ್ಟೆಯಲ್ಲಿ ವರುಣದೇವ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಬಣಕಲ್‍ನ ಅಬ್ಬಾಸ್ ಎಂಬುವರ ಮನೆ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಸುಣ್ಣದ ಗೂಡಿನ ಜಯಮ್ಮ ಎಂಬವರ ಮನೆ ಮೇಲೂ ಮರ ಬಿದ್ದು ಮನೆಗೆ ಹಾನಿಯಾಗಿದೆ. ಬಣಕಲ್‍ನ ಪೊಲೀಸ್ ಕ್ವಾಟರ್ಸ್ ನ ಮೇಲ್ಛಾವಣೆಯ ಶೀಟುಗಳು ಭಾರೀ ಗಾಳಿಗೆ ಹಾರಿ ಹೋಗಿವೆ. ಬೀಸ್ತಿರೋ ಗಾಳಿ, ಸುರಿಯುತ್ತಿರೋ ಮಳೆಗೆ ಮಲೆನಾಡಿಗರು ಭಯಭೀತರಾಗಿದ್ದಾರೆ.

ಚಿಕ್ಕಮಗಳೂರು-ಶೃಂಗೇರಿ ಮಾರ್ಗದ ಗೋರಿಗಂಡಿ ಬಳಿ ಭಾರೀ ಮಳೆಗಾಳಿಗೆ ರಾಜ್ಯ ಹೆದ್ದಾರಿ ಬಿರುಕು ಬಿಟ್ಟಿದೆ. ನಿರ್ಮಾಣ ಹಂತದ ಸೇತುವೆಗೆ ಹಾಕಿದ್ದ ಪಿಲ್ಲರ್ ಗಳು ಕೂಡ ನೆಲಕ್ಕುರುಳಿವೆ. ಮಲೆನಾಡಿನಾದ್ಯಂತ ಅಲ್ಲಲ್ಲೇ ಗ್ರಾಮೀಣ ಭಾಗದಲ್ಲಿ ಮರಗಳು ಧರೆಗುರುಳಿ ಸಂಚಾರ ಕೂಡ ಅಸ್ತವ್ಯಸ್ತಗೊಂಡಿದೆ. ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದ ಪರಿಣಾಮ ಮಲೆನಾಡಿನ ಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ.

ಕಳೆದ ವರ್ಷದ ಮಹಾಮಳೆ ಮಲೆನಾಡಿಗರು ಬದುಕನ್ನೇ ಅತಂತ್ರಗೊಳಿಸಿತ್ತು. ಎರಡ್ಮೂರು ತಿಂಗಳುಗಳ ಕಾಲ ಗಂಜಿ ಕೇಂದ್ರದಲ್ಲಿದ್ದ ಜನ ಹೊಸ ಬದುಕಿಗೆ ಅಣಿಯಾಗುತ್ತಿದ್ದರು. ಆದರೆ ಈಗ ವರುಣನ ಆಗಮನ ಅದೇ ರೀತಿಯಾಗಿದ್ದು ಮುಂದಿನ ದಿನಗಳಲ್ಲಿ ಇನ್ಯಾವ ಸಂಕಷ್ಟಕ್ಕೆ ಅಣಿಯಾಗಬೇಕೋ ಎಂದು ಜನ ಭಯಭೀತರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *