ಮಲಗಿದ್ದಾಗ ಪ್ಯಾಂಟ್ ಒಳಗೆ ಹೋದ ಹಾವು – 7 ಗಂಟೆ ಕಂಬ ಹಿಡಿದು ನಿಂತ ಯುವಕ

Public TV
1 Min Read

ಲಕ್ನೋ: ಮಲಗಿದ್ದ ಕಾರ್ಮಿಕನ ಪ್ಯಾಂಟ್ ಒಳಗೆ ನಾಗರಹಾವೊಂದು ಹೋಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಇರುವ ಸಿಕಂದರ್ ಪುರ ಎಂಬ ಗ್ರಾಮದಲ್ಲಿ ವಿದ್ಯುತ್ ಇಲಾಖೆಯ ಕಡೆಯಿಂದ ಕಂಬ ಹಾಕಿಸುವ ಕೆಲಸ ನಡೆಯುತಿತ್ತು. ಈ ಕೆಲಸಕ್ಕೆ ಖಾಸಗಿ ಕಾರ್ಮಿಕರನ್ನು ಕರೆದುಕೊಂಡು ಬರಲಾಗಿತ್ತು. ಈ ಕಾರ್ಮಿರಲ್ಲಿ ಒಬ್ಬನಾದ ಲವಕೇಶ್ ಕುಮಾರ್ ಮಲಗಿದ್ದಾಗ ನಾಗರಹಾವೊಂದು ಪ್ಯಾಂಟ್ ಒಳಗೆ ಹೋಗಿ ಸೇರಿಕೊಂಡಿದೆ.

ಎಂದಿನಂತೆ ಕೆಲಸ ಮುಗಿಸಿದ ಲವಕೇಶ್ ಕುಮಾರ್ ಕಾರ್ಮಿಕರಿಗೆ ಮಲಗಲು ನೀಡಿದ್ದ ಸಿಕಂದರ್ ಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹೋಗಿ ಮಲಗಿದ್ದಾನೆ. ಈ ವೇಳೆ ಆತನಿಗೆ ತಿಳಿಯದೆ ಹಾವೊಂದು ಆತನ ಪ್ಯಾಂಟ್ ಒಳಗೆ ಬಂದು ಮಲಗಿದೆ. ಮಧ್ಯರಾತ್ರಿ ಪ್ಯಾಂಟ್ ಒಳಗೆ ಏನೋ ಉಸಿರು ಬಿಟ್ಟಂತೆ ಆತನಿಗೆ ಭಾಸವಾಗಿದೆ. ಆಗ ಆತ ಎದ್ದು ನೋಡಿದಾಗ ಪ್ಯಾಂಟ್ ಒಳಗೆ ಹಾವು ಇರುವುದು ಗೊತ್ತಾಗಿದೆ. ನಂತರ ಆತ ಅಲ್ಲಡದೇ ನಿಂತ ಜಾಗದಲ್ಲೇ ಕಂಬ ಹಿಡಿದು 7 ಗಂಟೆ ನಿಂತಿದ್ದಾನೆ.

ಈ ಸಮಯದಲ್ಲಿ ಆತನ ಜೊತೆಗಿದ್ದ ಕಾರ್ಮಿಕರು ಹಾವು ಹಿಡಿಯುವರನ್ನು ಹುಡುಕಿ ಕರೆದುಕೊಂಡು ಬಂದಿದ್ದಾರೆ. ಆತ ಬಂದು ಹಾವನ್ನು ಪ್ಯಾಂಟ್‍ನಿಂದ ಹೊರತೆಗೆಯುವ ತನಕ ಲವಕೇಶ್ ಅಲ್ಲಡದೇ ಹಾವಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾನೆ. ನಂತರ ಸ್ಥಳಕ್ಕೆ ಬಂದ ಉರಗ ತಜ್ಞ ಪ್ಯಾಂಟ್ ಅನ್ನು ಹರಿದು ನಿಧಾನವಾಗಿ ಹಾವನ್ನು ಹೊರ ತೆಗೆದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಉರಗ ತಜ್ಞ, ಆತನ ಅದೃಷ್ಟ ಚೆನ್ನಾಗಿದೆ. ಏಳು ಗಂಟೆಗಳ ಕಾಲ ಆತನ ಪ್ಯಾಂಟ್‍ನಲ್ಲೇ ಮಲಗಿರುವ ಹಾವು ಆತನಿಗೆ ಕಚ್ಚಿಲ್ಲ. ಆತ ಪಿಲ್ಲರ್ ಹಿಡಿದು ಅಲ್ಲಡದೇ ನಿಂತ ಕಾರಣ ಹಾವಿಗೆ ನಾನು ಮಾನವನ ಪ್ಯಾಂಟ್‍ನಲ್ಲಿದ್ದೇನೆ ಎನ್ನುವುದು ಗೊತ್ತಾಗಿಲ್ಲ ಎಂದು ಹೇಳಿದ್ದಾರೆ. ಕಂಬ ಹಿಡಿದು ನಿಂತಿರುವ ಯುವಕನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *