ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದ್ರೆ ತಪ್ಪೇನು- ಸಿ.ಟಿ.ರವಿ ಪ್ರಶ್ನೆ

Public TV
1 Min Read

ಚಿಕ್ಕಮಗಳೂರು: ಇತರ ಅಭಿವೃದ್ಧಿ ನಿಗಮಗಳಂತೆ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಇದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಹಿತಾಸಕ್ತಿಯೇ ಮುಖ್ಯ ಎನ್ನುವುದಾದರೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಯಾಕೆ ಬೇಕು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯಾಕೆ ಬೇಕು? ಭೋವಿ, ಅಂಬೇಡ್ಕರ್, ಕಾಡುಗೊಲ್ಲ, ಉಪ್ಪಾರ ಸೇರಿದಂತೆ ಹತ್ತಾರು ಅಭಿವೃದ್ಧಿ ನಿಗಮಗಳಿವೆ. ಅದೇ ರೀತಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುತ್ತಿದೆ. ಇದರಲ್ಲಿ ತಪ್ಪು ಹುಡುಕುವರು ಟಿಪ್ಪು ಜಯಂತಿ ವೇಳೆ ಯಾಕೆ ಸುಮ್ಮನಿದ್ದರುಮ, ಟಿಪ್ಪು ಕನ್ನಡ ಪ್ರೇಮಿನಾ, ಅವನ ಕಾಲದಲ್ಲೇ ಊರುಗಳ ಹೆಸರು ಬದಲಾಗಿದ್ದು ಎಂದು ಕಿಡಿಕಾರಿದರು.

ಮರಾಠಿಗರು ರಾಜ್ಯಾದ್ಯಂತ ಇದ್ದಾರೆ, ನಮ್ಮ ಜಿಲ್ಲೆಯಲ್ಲಿ ಸಹ ಇದ್ದಾರೆ. ಹೀಗಾಗಿ ಅವರ ಅಭಿವೃದ್ಧಿಗೋಸ್ಕರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಲಾಗುತ್ತಿದೆ. ಕರ್ನಾಟದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಕ್ಕೇ ಆಧ್ಯತೆ. ಮರಾಠರು ಬೆಳಗಾವಿ, ಬೀದರ್ ಮಾತ್ರವಲ್ಲ ನಮ್ಮ ಜಿಲ್ಲೆಯಲ್ಲೂ ಇದ್ದಾರೆ. ಕನ್ನಡ ರಾಜ್ಯಭಾಷೆಯಾಗಿಟ್ಟುಕೊಂಡೇ ವಿವಿಧ ಭಾಷೆಗಳ ಅಕಾಡೆಮಿಗಳನ್ನು ಮಾಡಿದ್ದೇವೆ. ಆದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಇದರಲ್ಲಿ ಎರಡು ಮಾತಿಲ್ಲ. ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಲಾಗಿದೆ ಅಷ್ಟೆ ಎಂದು ಅವರು ತಿಳಿಸಿದರು.

ಸಂಪತ್ ರಾಜ್ ಬಂಧನ ಪ್ರಕರಣದ ಕುರಿತು ಮಾತನಾಡಿದ ಅವರು, ಸಂಪತ್ ರಾಜ್‍ಗೆ ಯಾರು ರಕ್ಷಣೆ ಕೊಟ್ಟಿದ್ದರು, ಯಾರು ಮುಚ್ಚಿಟ್ಟಿದ್ದರು ಎಂಬುದನ್ನು ಡಿ.ಕೆ.ಶಿವಕುಮಾರ್ ಅವರು ಹೇಳಬೇಕು. ಅವರು ಬಹಳ ದಿನಗಳ ಹಿಂದೆ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಇದನ್ನು ಮುಚ್ಚಿಟ್ಟಿದ್ದವರು ಯಾರು, ಕಾಂಗ್ರೆಸ್‍ನ 2 ಗುಂಪುಗಳ ಜಗಳ ಶಾಸಕನ ಮನೆಗೆ ಬೆಂಕಿ ಹಾಕಲು ಕಾರಣವಾಯಿತು. ಅವರಿಗೆ ಒಂದು ನೆಪ ಬೇಕಿತ್ತು. ಅದನ್ನು ಬಳಸಿಕೊಂಡು ಬೆಂಕಿ ಹಾಕುವ ಕೆಲಸ ಮಾಡಿದರು. ಒಂದು ಗುಂಪು ಬೆಂಕಿ ಹಾಕೋದರ ಪರ, ಮತ್ತೊಂದು ಹಾಕಿಸಿಕೊಂಡವರ ಪರ. ಇದರಿಂದ ಅವರದ್ದೇ ಪಕ್ಷದ ದಲಿತ ಶಾಸಕರಿಗೆ ರಕ್ಷಣೆ ಇಲ್ಲದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಯಿತು. ಕಾನೂನು ಯಾರ ಕೈಗೊಂಬೆಯಲ್ಲ, ಅದು ಅದರ ಕೆಲಸ ಮಾಡಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *