ಮನೆ ಕಳೆದುಕೊಂಡ ತಮ್ಮ ಗ್ರಾಮಸ್ಥರ ನೆರವಿಗೆ ಬಂದ ಪೃಥ್ವಿ ಶಾ

Public TV
2 Min Read

ಮುಂಬೈ: ಭಾರತ ತಂಡ ಆಟಗಾರ 20 ವರ್ಷದ ಪೃಥ್ವಿ ಶಾ ತಮ್ಮ ಗ್ರಾಮದ ನಿವಾಸಿಗಳ ಮನೆಯನ್ನು ರಿಪೇರಿ ಮಾಡಿಸಿಕೊಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಸದ್ಯ ಲಾಕ್‍ಡೌನ್‍ನಿಂದ ತಮ್ಮ ಗ್ರಾಮದಲ್ಲೇ ಬಂಧಿಯಾಗಿರುವ ಪೃಥ್ವಿ ಶಾ, ರಾಜಕಾರಣಿ ಸಂಜಯ್ ಪೊಟ್ನಿಸ್ ತೋಟದ ಮನೆಯಲ್ಲಿ ಉಳಿದಿದ್ದಾರೆ. ಸಂಜಯ್ ಅವರ ಮಗ ಯಶ್ ಮತ್ತು ಪೃಥ್ವಿ ಶಾ ಇಬ್ಬರು ಗೆಳೆಯರಾಗಿದ್ದು, ಇವರಿಬ್ಬರು ಒಟ್ಟಿಗೆ ಅವರ ತೋಟದ ಮನೆಯಲ್ಲಿ ಉಳಿದುಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಭಾರತದಲ್ಲೇ ಅತೀ ಹೆಚ್ಚು ಕೊರೊನಾ ಸೋಂಕಿತರು ಮಹಾರಾಷ್ಟ್ರದಲ್ಲಿ ಇದ್ದಾರೆ. ಕೊರೊನಾದಿಂದ ನಲುಗಿದ್ದ ಮಹಾಗೆ ಸೈಕ್ಲೋನ್ ಕೂಡ ಪೆಟ್ಟುಕೊಟ್ಟಿತ್ತು. ಈ ಸೈಕ್ಲೋನ್‍ನಿಂದ ಪೃಥ್ವಿ ಅವರ ಸ್ವಗ್ರಾಮವಾದ ಮಾಂಡ್ವಾದ ಧೋಕವಾಡೆದಲ್ಲಿ ಹಲವಾರು ಮನೆಗಳು ಹಾನಿಯಾಗಿದ್ದರು. ಈ ಹಾಳಾಗಿದ್ದ ಮನೆಗಳನ್ನು ಸರಿಪಡಿಸಲು ಪೃಥ್ವಿ ಗ್ರಾಮಸ್ಥರಿಗೆ ಸಹಾಯ ಮಾಡುತ್ತಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ಸಂಜಯ್ ಪೊಟ್ನಿಸ್, ಪೃಥ್ವಿ ಮತ್ತು ನನ್ನ ಮಗ ಲಾಕ್‍ಡೌನ್‍ನಿಂದ ನಮ್ಮ ಮನೆಯಲ್ಲೇ ಇದ್ದಾರೆ. ಸೈಕ್ಲೋನ್ ಇಲ್ಲಿ ಜಾಸ್ತಿ ಅವಾಂತರವನ್ನು ಸೃಷ್ಟಿಸಿದೆ. ನಮ್ಮ ಧೋಕವಾಡೆ ಗ್ರಾಮ ಹಾನಿಗೊಳಗಾಗಿದೆ. ನಮ್ಮ ಮನೆಗೂ ಕೂಡ ಹಾನಿಯಾಗಿದೆ. ಗ್ರಾಮಸ್ಥರ ಕಷ್ಟವನ್ನು ನೋಡಿ ಪೃಥ್ವಿ ಮತ್ತು ನನ್ನ ಮಗ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಪೃಥ್ವಿ ಇದರ ಜೊತೆಗೆ ಕಷ್ಟದಲ್ಲಿ ಇರುವ ಜನರಿಗೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾನೆ ಎಂದು ಹೇಳಿದ್ದಾರೆ.

ಈ ಎಲ್ಲದರ ಜೊತೆಗೆ ಪೃಥ್ವಿ ತೋಟದ ಮನೆಯಲ್ಲಿ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇತರ ಆಟಗಾರರಂತೆ ಅವರು ಕೂಡ ಕಳೆದ ಮಾರ್ಚ್‍ನಿಂದ ಕ್ರಿಕೆಟ್‍ನಿಂದ ದೂರು ಉಳಿದಿದ್ದಾರೆ. ಕಳೆದ ಮಾರ್ಚ್‍ನಲ್ಲಿ ನಡೆಯಬೇಕಿದ್ದ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಪೃಥ್ವಿ ಶಾ ಆಯ್ಕೆಯಾಗಿದ್ದರು. ಆದರೆ ಸರಣಿ ಆರಂಭವಾಗುವ ಮುನ್ನವೇ ಕೊರೊನಾ ವೈರಸ್ ನಿಂದ ಕೇಂದ್ರ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿದ ಕಾರಣ ಅದು ಕೂಡ ನಿಂತು ಹೋಗಿತ್ತು.

ಕಳೆದ ವರ್ಷ ಡೋಪಿಂಗ್ ಉಲ್ಲಂಘನೆ ಮಾಡಿದ್ದಾರೆ ಎಂದು ಪೃಥ್ವಿ ಶಾ ಅವರನ್ನು ಎಂಟು ತಿಂಗಳು ಕ್ರಿಕೆಟ್‍ನಿಂದ ನಿಷೇಧ ಮಾಡಲಾಗಿತ್ತು. ಇದಾದ ನಂತರ ಶಾ ಭಾರತ ಎ ತಂಡಕ್ಕೆ ಮರಳುವ ಮೂಲಕ ಕ್ರಿಕೆಟ್‍ಗೆ ವಾಪಸ್ ಆಗಿದ್ದರು. ನಂತರ ನ್ಯೂಜಿಲೆಂಡ್‍ನಲ್ಲಿ ನಡೆದ ಮೂರು ಏಕದಿನ ಮತ್ತು ಎರಡು ಟೆಸ್ಟ್ ಸರಣಿಯಲ್ಲೂ ಆಡಿದ್ದರು. ಇದರ ಜೊತೆಗೆ 2020ರ ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಬೇಕಿತ್ತು. ಆದರೆ ಕೊರೊನಾ ಭೀತಿಯಿಂದ ಐಪಿಎಲ್ ಕೂಡ ಮುಂದಕ್ಕೆ ಹೋಗಿದೆ.

Share This Article
Leave a Comment

Leave a Reply

Your email address will not be published. Required fields are marked *