ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ವ್ಯಕ್ತಿಯ ಕಣ್ಣಿನ ಪೊರೆ ಚಿಕಿತ್ಸೆ ಯಶಸ್ವಿ

Public TV
2 Min Read

ಬೆಂಗಳೂರು: ಕಷ್ಟದಲ್ಲಿರುವವರ ಸಹಾಯಕ್ಕೆ ನಿಲ್ಲುವ ಪಬ್ಲಿಕ್ ಟಿವಿಯ ಜನಪ್ರಿಯ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮದ ಮೂಲಕ ಅದೆಷ್ಟೋ ಜನರಿಗೆ ಸಹಾಯವಾಗಿದೆ. ಈ ಸಾಲಿನಲ್ಲಿ ಇದೀಗ ಕಣ್ಣಿನ ಪೊರೆಯಿಂದ ಅಂಧಕಾರದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಬೆಳಕು ನೀಡಿದೆ.

ನಂಜುಂಡೇಶ್ವರಯ್ಯನವರಿಗೆ ಕಣ್ಣಿನ ಪೊರೆಯ ಸಮಸ್ಯೆಯಿತ್ತು. ಇವರಿಗೆ ಮಕ್ಕಳು ಇರಲಿಲ್ಲ. ಪಬ್ಲಿಕ್ ಟಿವಿಯ ‘ಮನೆಯೇ ಮಂತ್ರಾಲಯ’ಕ್ಕೆ ಕರೆ ಮಾಡಿ ಸಹಾಯ ಕೇಳಿದ್ದರು. ಈ ಹಿನ್ನೆಲೆ ನಾರಾಯಣ ನೇತ್ರಾಲಯದ ಸಹಕಾರದಿಂದ ಕಣ್ಣಿನ ಪೊರೆ ಚಿಕಿತ್ಸೆಯನ್ನ ಯಶಸ್ವಿಯಾಗಿ ಮಾಡಿಸಲಾಗಿದೆ. ಇದೀಗ ನಂಜುಂಡೇಶ್ವರಯ್ಯನವರಿಗೆ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿದ್ದು, ಎಲ್ಲರಂತೆ ಪ್ರಪಂಚವನ್ನು ನೋಡುತ್ತಿದ್ದಾರೆ.

ಈ ಕುರಿತು ನಾರಾಯಣ ನೇತ್ರಾಲಯದ ನಿರ್ದೇಶಕ ಭುಜಂಗ ಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿದ್ದು, ಕೊರೊನಾ ಲಾಕ್‍ಡೌನ್‍ನಿಂದಾಗಿ ನಂಜುಂಡಯ್ಯನವರಿಗೆ ತುಂಬಾ ಸಮಸ್ಯೆಯಾಗಿತ್ತು. ರೇಷನ್ ಇರಲಿಲ್ಲ, ಅಗತ್ಯ ವಸ್ತುಗಳ ಕೊರತೆ ಇತ್ತು. ಪಬ್ಲಿಕ್ ಟಿವಿಯವರು ಇದನ್ನು ವ್ಯವಸ್ಥೆ ಮಾಡಿದರು. ಈ ವೇಳೆ ನಂಜುಂಡಯ್ಯನವರು ನಾನೊಬ್ಬ ಕಲಾವಿದ ನನಗೆ ಕಣ್ಣು ಕಾಣುವುದಿಲ್ಲ. ತುಂಬಾ ತೊಂದರೆಯಾಗಿದೆ, ಏನೂ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದರು. ಪಬ್ಲಿಕ್ ಟಿವಿಯವರು ನಮ್ಮನ್ನು ಸಂಪರ್ಕಿಸಿ, ನೀವೇನಾದರೂ ಅವರಿಗೆ ಸಹಾಯ ಮಾಡಬಹುದಾ ಎಂದು ಕೇಳಿದರು.

ಆಗ ತುಂಬಾ ಸಂತೋಷದಿಂದ ನನಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಕಳುಹಿಸಿಕೊಡಿ ಎಂದು ಹೇಳಿದೆ. ಅವರು ಬಂದ ತಕ್ಷಣ ಎರಡೂ ಕಣ್ಣನ್ನು ಪರೀಕ್ಷೆ ಮಾಡಲಾಯಿತು. ಆಗ ಪೊರೆ ಇರುವುದು ಕಂಡು ಬಂತು. ಹೀಗಾಗಿ ಅವರಿಗೆ ಏನೂ ಕಾಣುತ್ತಿರಲಿಲ್ಲ. ಪೊರೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆವು. ಆದರೆ ಆಗ ಅವರಿಗೆ ಶುಗರ್ ತುಂಬಾ ಜಾಸ್ತಿ ಇತ್ತು. ಹೀಗಾಗಿ ಒಂದು ವಾರ ಸಮಯಾವಕಾಶ ತೆಗೆದುಕೊಂಡು ಶುಗರ್ ನಿಯಂತ್ರಣಕ್ಕೆ ಬಂದ ಬಳಿಕ ಶನಿವಾರ ಅವರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿದೆವು. ನಂತರ ಪರೀಕ್ಷೆ ನಡೆಸಿದಾಗ ಅವರಿಗೆ ತುಂಬಾ ಚೆನ್ನಾಗಿ ದೃಷ್ಟಿ ಬಂದಿದೆ. ಮನೆಯೇ ಮಂತ್ರಾಲಯ ತುಂಬಾ ಒಳ್ಳೆಯ ಕಾರ್ಯಕ್ರಮ, ಇದರಿಂದ ಹಲವು ಜನರಿಗೆ ನಾನಾ ರೀತಿಯ ಸಹಾಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಕುರಿತು ನಂಜುಂಡೇಶ್ವರಯ್ಯನವರು ಮಾತನಾಡಿ, ಸೈನ್ ಬೋರ್ಡ್ ಹಾಗೂ ಬ್ಯಾನರ್ ಆರ್ಟಿಸ್ಟ್. ಕೊರೊನಾ ಲಾಕ್‍ಡೌನ್‍ನಿಂದಾಗಿ ಕೆಲಸ ನಿಂತಿತ್ತು. ಆದಾಯವಿಲ್ಲದೆ ಮನೆ ಬಾಡಿಗೆ ಕಟ್ಟಲೂ ಅಸಾಧ್ಯವಾಗಿತ್ತು. ಅಲ್ಲದೆ ನನಗೆ ಕಣ್ಣು ಕಾಣುತ್ತಿರಲಿಲ್ಲ. ಇದರಿಂದ ತುಂಬಾ ಸಮಸ್ಯೆಯಾಗಿತ್ತು. ಶುಗರ್ ಸಹ ಇದ್ದಿದ್ದರಿಂದ ಶಸ್ತ್ರಚಿಕಿತ್ಸೆಗೆ ತಡವಾಯಿತು. ನಂತರ ಶಸ್ತ್ರಚಿಕಿತ್ಸೆ ಮಾಡಿ ಕಣ್ಣು ಕಾಣುವ ಹಾಗಾಗಿದೆ. ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಕೊಡಿಸಿ ಸಹಾಯ ಮಾಡಿದರು. ಇದಕ್ಕೆಲ್ಲ ಕಾರಣ ಪಬ್ಲಿಕ್ ಟಿವಿಯ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮ. ಪಬ್ಲಿಕ್ ಟಿವಿಗೆ ಧನ್ಯವಾದ ಹೇಳುತ್ತೇನೆ ಎಂದರು.

ನಂಜುಂಡೇಶ್ವರಯ್ಯನವರ ಪತ್ನಿ ನಿರ್ಮಲಾ ಅವರು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಪತಿಗೆ ಕಣ್ಣು ಕಾಣುತ್ತಿರಲಿಲ್ಲ. ನಾರಾಯಣ ನೇತ್ರಾಲಯದಿಂದ ಶಸ್ತ್ರಚಕಿತ್ಸೆ ಮಾಡಿಸಿದ ಬಳಿಕ ಕಣ್ಣು ಕಾಣಿಸುತ್ತಿದೆ. ಪಬ್ಲಿಕ್ ಟಿವಿ ಹಾಗೂ ಭುಜಂಗ ಶೆಟ್ಟಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *