ಮನೆಬಿಟ್ಟು ಬೆಂಗ್ಳೂರಿನಿಂದ ಮುಂಬೈಗೆ ಹೋದ ಅಪ್ರಾಪ್ತೆ – ಟ್ಯಾಕ್ಸಿಯಲ್ಲಿ ಲೈಂಗಿಕ ಕಿರುಕುಳ

Public TV
2 Min Read

– ಆಸ್ಪತ್ರೆಯಿಂದ ತಪ್ಪಿಸಿಕೊಂಡು ಕಾಮುಕರ ಕೈಗೆ ಸಿಕ್ಕ ಬಾಲಕಿ

ಮುಂಬೈ: ಕಳೆದ ವರ್ಷ ಮನೆಯಿಂದ ಪರಾರಿಯಾಗಿದ್ದ 17 ವರ್ಷದ ಬಾಲಕಿಗೆ ಮುಂಬೈನಲ್ಲಿ ಚಲಿಸುವ ಕ್ಯಾಬ್ ಒಳಗೆ ಲೈಂಗಿಕ ಕಿರುಕುಳ ನೀಡಿದ್ದು, ಪ್ರಕರಣ ದಾಖಲಾಗಿದೆ.

2019ರ ನವೆಂಬರ್ ನಲ್ಲಿ ಬಾಲಕಿ ಬೆಂಗಳೂರಿನಲ್ಲಿರುವ ತನ್ನ ಮನೆಯಿಂದ ಓಡಿ ಮುಂಬೈಗೆ ಬಂದಿದ್ದಳು. ಮುಂಬೈಗೆ ಬಂದ ಬಾಲಕಿ ಅಲ್ಲಿನ ಕುರ್ಲಾದ ಹೋಟೆಲ್‍ನಲ್ಲಿ ಕೆಲಸ ಸೇರಿಕೊಂಡಿದ್ದಳು. ಅಲ್ಲಿ ಅವಳಿಗೆ 18 ವರ್ಷದ ಹುಡುಗನೊಂದಿಗೆ ಸ್ನೇಹ ಬೆಳೆದಿದೆ. ಸ್ವಲ್ಪ ಸಮಯದ ನಂತರ ಇಬ್ಬರು ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ. ಆದರೆ ಕಳೆದ ಜೂನ್ 26ರಂದು ಆತ ಧಾರಾವಿಯ ಸೇತುವೆಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೆ ಬಾಲಕಿಯೇ ಕಾರಣ ಎಂದು ಹುಡುಗನ ಮನೆಯವರು ದೂರು ನೀಡಿದ್ದರು.

ಬಾಲಕಿಯನ್ನು ವಶಕ್ಕೆ ಪಡೆದ ಪೊಲೀಸರು, ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಮುಂದೆ ಹಾಜರುಪಡಿಸಿದ್ದಾರೆ. ಆಕೆ ಇನ್ನೂ ಅಪ್ರಾಪ್ರೆಯಾಗಿರುವ ಕಾರಣ ಮನೆಗೆ ಕಳುಹಿಸಿ ಎಂದು ಪೊಲೀಸರಿಗೆ ಸಿಡಬ್ಲ್ಯೂಸಿ ನಿರ್ದೇಶನ ನೀಡಿತ್ತು. ಸದ್ಯ ದೇಶದಲ್ಲಿ ಲಾಕ್‍ಡೌನ್ ಇದ್ದ ಕಾರಣ ಆಕೆಯನ್ನು ಪೊಲೀಸರಿಗೆ ಮನೆಗೆ ವಾಪಸ್ ಕಳುಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಆಕೆಯನ್ನು ಅಲ್ಲೇ ಮಕ್ಕಳ ಕಲ್ಯಾಣ ಸಮಿತಿ ಕಟ್ಟದಲ್ಲಿ ಇರಿಸಿದ್ದರು. ಆದರೆ ಅಲ್ಲಿ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಳು.

ಅನಾರೋಗ್ಯಕ್ಕೆ ತುತ್ತಾದ ಬಾಲಕಿಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆಕೆ ಜುಲೈ 11ರಂದು ಆಸ್ಪತ್ರೆಯಿಂದ ಪರಾರಿಯಾಗಿದ್ದಾಳೆ. ಈ ವೇಳೆ ಅವಳು ಟ್ಯಾಕ್ಸಿ ಬಳಸಿ ಪುಣೆಗೆ ಎಸ್ಕೇಪ್ ಆಗಲು ನೋಡಿದ್ದಾಳೆ. ಇದನ್ನೇ ಬಳಸಿಕೊಂಡ ಟ್ಯಾಕ್ಸಿ ಚಾಲಕ ಮತ್ತು ಆತನ ಸ್ನೇಹಿತರು ಆಕೆಯನ್ನು ಟ್ಯಾಕ್ಸಿಯಲ್ಲಿ ಕೂರಿಸಿಕೊಂಡು, ಚಲಿಸುತ್ತಿದ್ದ ಟ್ಯಾಕ್ಸಿಯಲ್ಲೇ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಆಕೆ ಕಿರುಚಿಕೊಂಡಾಗ ಆರೋಪಿಗಳು ಅವಳನ್ನು ಮುಂಬ್ರಾಕ್ಕೆ ಕರೆದೊಕೊಂಡು ಹೋಗಿದ್ದಾರೆ.

ಇತ್ತ ಕಾಣೆಯಾದ ಬಾಲಕಿಯನ್ನು ಹುಡುಕಲು ಮುಂದಾದ ಪೊಲೀಸರು, ಆಸ್ಪತ್ರೆ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆಗ ಬಾಲಕಿ ಟ್ಯಾಕ್ಸಿ ಡ್ರೈವರ್ ಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಆಗ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಬಳಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಾಲಕಿಯನ್ನು ರಕ್ಷಿಸಿದ್ದಾರೆ. ಸದ್ಯ ಆರೋಪಿಗಳ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *