ಮನೆಗೆ ವಾಪಸ್ ಬರುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿ ವಿಮಾನ ನಿಲ್ದಾಣದಲ್ಲೇ ಸಾವು

Public TV
2 Min Read

– ಅನಾರೋಗ್ಯವಿದ್ರೂ ವಿದ್ಯಾಭ್ಯಾಸ ಮುಂದುವರಿಸಿದ್ದ ವಿದ್ಯಾರ್ಥಿನಿ
– ಆಕೆಯ ಪಾಲಿಗೆ ಅಧ್ಯಯನದ ಮೇಲಿನ ಉತ್ಸಾಹ ಎಲ್ಲಕ್ಕಿಂತ ಹೆಚ್ಚಾಗಿತ್ತು

ತಿರುವನಂತಪುರಂ: ಕೇರಳ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ತಮ್ಮ ಮನೆಗೆ ವಾಪಸ್ ಬರುವ ಮೊದಲೇ ವಿಮಾನ ನಿಲ್ದಾಣದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಲೀಜಾ ಜೋಸ್ (28) ಮೃತ ಸಂಶೋಧನಾ ವಿದ್ಯಾರ್ಥಿನಿ. ಇವರು ದಕ್ಷಿಣ ಕೊರಿಯಾದಿಂದ ಕೇರಳದ ಇಡುಕ್ಕಿಯಲ್ಲಿರುವ ತಮ್ಮ ಮನೆಗೆ ವಾಪಸ್ ಬರುತ್ತಿದ್ದರು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಲೀಜಾ ಜೋಸ್ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಇಡುಕ್ಕಿ ಜಿಲ್ಲೆಯ ಚೆರುಥೋನಿ ಮೂಲದ ಲೀಜಾ ಜೋಸ್, ದಕ್ಷಿಣ ಕೊರಿಯಾದ ಪುಸಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದರು. ಮನೆಗೆ ವಾಪಸ್ ಬರಲು ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ವಿಮಾನ ನಿಲ್ದಾಣದಲ್ಲಿ ಕುಸಿದುಬಿದ್ದಿದ್ದಾರೆ. ತಕ್ಷಣ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ಲೀಜಾ ಜೋಸ್ ಮೃತಪಟ್ಟಿದ್ದರು. ಆದರೆ ವಿದ್ಯಾರ್ಥಿನಿಯ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಕುಟುಂಬದವರು ಆಕೆ ಅನಾರೋಗ್ಯದಿಂದ ಬಳಲುತ್ತಿದ್ದು, ಕಿವಿ ನೋವಿತ್ತು ಎಂದು ಹೇಳಿದ್ದಾರೆ. ಮೃತ ಲೀಜಾ ಜೋಸ್ ದಕ್ಷಿಣ ಕೊರಿಯಾದಲ್ಲಿ ನಾಲ್ಕು ವರ್ಷಗಳಿಂದ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ. ಫೆಬ್ರವರಿಯಲ್ಲಿ ಕೇರಳಕ್ಕೆ ಬಂದಿದ್ದಾಗ ಲೀಜಾ ಜೋಸ್ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ವೀಸಾ ಅವಧಿ ಮುಗಿಯಲಿದ್ದರಿಂದ ಲೀಜಾ ಮತ್ತೆ ದಕ್ಷಿಣ ಕೊರಿಯಾಕ್ಕೆ ಹೋಗಿದ್ದರು.

ನಾನು ಇಲ್ಲಿಯವರೆಗೆ ಮಾಡಿದ ಪ್ರಾಜೆಕ್ಟ್‌ಗಳನ್ನು ಹಿಂತಿರುಗಿಸದಿದ್ದರೆ ನನ್ನ ಸಂಶೋಧನೆ ವ್ಯರ್ಥವಾಗುತ್ತದೆ ಎಂದು ಪೋಷಕರಿಗೆ ಹೇಳಿದ್ದಳು. ದಕ್ಷಿಣ ಕೊರಿಯಾಕ್ಕೆ ಹಿಂದಿರುಗಿದ ನಂತರ ಲೀಜಾ 14 ದಿನಗಳ ಕಾಲ ಕ್ವಾರಂಟೈನಲ್ಲಿದ್ದರು. ಈ ಸಮಯದಲ್ಲಿಯೇ ಅವಳಿಗೆ ಕಿವಿ ನೋವು ಕಾಣಿಸಿಕೊಂಡಿದೆ. ಅಲ್ಲದೇ ಕಫ ಕೂಡ ಇತ್ತು. ಆದರೆ ಕೋವಿಡ್ ಟೆಸ್ಟ್ ಮಾಡಿಸಿದಾಗ ವರದಿಯಲ್ಲಿ ನೆಗೆಟಿವ್ ಬಂದಿತ್ತು. ನಂತರ ವೈದ್ಯಕೀಯ ಸಲಹೆ ಮೇರೆಗೆ ಕ್ಯಾರೆಂಟೈನ್ ಅವಧಿ ಮುಗಿದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

ಲೀಜಾಗೆ ವೈದ್ಯರು ಔಷಧಿ ನೀಡಿದ್ದರು. ಒಂದು ವೇಳೆ ಔಷಧಿಗಳಿಂದ ಗುಣಮುಖವಾಗದಿದ್ದರೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗುತ್ತದೆ ಎಂದು ತಿಳಿಸಿದ್ದರು. ಲೀಜಾ ಪೋಷಕರು ಮಗಳ ಆರೋಗ್ಯ ಸ್ಥಿತಿಯನ್ನು ತಿಳಿದ ನಂತರ ಶೀಘ್ರದಲ್ಲೇ ಮನೆಗೆ ವಾಪಸ್ ಬರುವಂತೆ ಕೇಳಿಕೊಂಡಿದ್ದರು. ಆದರೆ ಲೀಜಾ ತನ್ನ ಅಧ್ಯಯನವನ್ನು ಮುಂದುವರಿಸಲು ಮತ್ತು ಪಿಎಚ್‍ಡಿ ಪಡೆಯಲು ನಿರ್ಧರಿಸಿದ್ದಳು. ಅವಳ ಪಾಲಿಗೆ ಅಧ್ಯಯನದ ಮೇಲಿನ ಉತ್ಸಾಹ ಎಲ್ಲಕ್ಕಿಂತ ಹೆಚ್ಚಾಗಿತ್ತು ಎಂದು ಲೀಜಾ ಚಿಕ್ಕಪ್ಪ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *