ಮದ್ವೆ ವಯಸ್ಸಿನ ಮಗಳಿದ್ರೂ ಅಪ್ರಾಪ್ತೆಯನ್ನು ಮದುವೆಯಾಗಲು ಹೊರಟ ವ್ಯಕ್ತಿ ಪೊಲೀಸರ ವಶಕ್ಕೆ

Public TV
1 Min Read

ಹಾಸನ: ಹೆಂಡತಿ ಸತ್ತು ವರ್ಷದೊಳಗೆ ದುರಾಸೆಯಿಂದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಹೋಗಿದ್ದ ವ್ಯಕ್ತಿಯೋರ್ವ ಕೊನೆಗೆ ಜೈಲುಪಾಲಾಗಿರೋ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ನಡೆದಿದೆ.

ಅರಕಲಗೂಡು ತಾಲೂಕಿನ ಯೋಗೇಶ್ ಗೌಡ (47) ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಹೊರಟಿದ್ದ ಆರೋಪಿಯಾಗಿದ್ದಾನೆ. ವರ್ಷದ ಹಿಂದೆ ಈತನ ಪತ್ನಿ ಅಕಾಲಿಕ ಮರಣ ಹೊಂದಿದ್ದರು. ವರ್ಷದೊಳಗೆ ಮನೆಯಲ್ಲಿ ಶುಭ ಕಾರ್ಯ ನಡೆಯಬೇಕೆಂಬ ಸಂಪ್ರದಾಯದ ಹಿನ್ನೆಲೆಯಲ್ಲಿ ಈತ ಈಗ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಹೋಗಿದ್ದಾನೆ. ಸದ್ಯ ಆ ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ರಕ್ಷಣೆ ಮಾಡಿದ್ದಾರೆ.

ದಾವಣಗೆರೆ ಮೂಲದ ಅಪ್ರಾಪ್ತ ಬಾಲಕಿಗೆ ಸರ್ಕಾರಿ ಕೆಲಸ ಕೊಡಿಸುವ ಆಮಿಷವನ್ನೊಡ್ಡಿ, ಬಳಿಕ ಹಾಸನ ಜಿಲ್ಲೆಯ ಆಲೂರು ತಾಲೂಕಿನ ದೇವಾಲಯವೊಂದರಲ್ಲಿ ಮದುವೆಯಾಗಲು ಮುಂದಾಗಿದ್ದಾನೆ ಎನ್ನಲಾಗಿದೆ. ಇನ್ನು ಯೋಗೇಶ್ ಗೌಡಗೆ ಈಗಾಗಲೇ ಮದುವೆಗೆ ಬಂದಿರೋ ಮಗಳಿದ್ದು, ಮಗಳ ಮದವೆ ಕೂಡಾ ಜುಲೈ ತಿಂಗಳಲ್ಲಿ ನಿಶ್ಚಯವಾಗಿತ್ತು. ಮಗಳ ಮದುವೆಗೂ ಮುನ್ನ ಈತ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಮನೆ ತುಂಬಿಸಿಕೊಳ್ಳುವಷ್ಟರಲ್ಲಿ ವಿಚಾರ ತಿಳಿದ ಅಧಿಕಾರಿಗಳು ದೇವಾಲಯಕ್ಕೆ ದಾಳಿ ನಡೆಸಿ ಸದ್ಯ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಹೆಚ್ಚಾಯ್ತು ಬಾಲ್ಯ ವಿವಾಹ – ಪೋಷಕರಿಗೆ ಪೊಲೀಸರಿಂದ ಖಡಕ್ ಎಚ್ಚರಿಕೆ

ಇನ್ನು ಆರೋಪಿಯಾಗಿರೋ ಯೋಗೇಶ್ ಗೌಡನ ವಿರುದ್ಧ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗದಗ- ಏಪ್ರಿಲ್, ಮೇನಲ್ಲಿ 21 ಬಾಲ್ಯ ವಿವಾಹ ತಡೆದ ಅಧಿಕಾರಿಗಳು

Share This Article
Leave a Comment

Leave a Reply

Your email address will not be published. Required fields are marked *