– ತಾಯಿ ಜೊತೆ ಇದ್ದಾಗಲೇ 19 ವರ್ಷದ ಯುವತಿಯ ಕೊಲೆ
ಲಕ್ನೋ: ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ದೆಹಲಿಯ ಸುಂದರ್ ನಗರಿ ಪ್ರದೇಶದ ಶೇರ್ ಖಾನ್ ಎಂದು ಗುರುತಿಸಲಾಗಿದೆ. ಮದುವೆಗೆ ನಿರಾಕರಿಸಿದ್ದಕ್ಕೆ 19 ವರ್ಷದ ಯುವತಿಯನ್ನು ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದನು. ಇದೀಗ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಜೂನ್ 17 ರಂದು ಯುವತಿ ತುಳಸಿ ನಿಕೇತನ್ ಕಾಲೋನಿ ಮಾರುಕಟ್ಟೆಯಿಂದ ತನ್ನ ಪೋಷಕರೊಂದಿಗೆ ಹಿಂದಿರುಗುತ್ತಿದ್ದಳು. ಆಕೆ ಮತ್ತು ಅವಳ ತಾಯಿ ಸ್ನ್ಯಾಕ್ಸ್ ತಿನ್ನಲು ಹೋಗಿದ್ದರು. ಆದರೆ ಯುವತಿಯ ತಂದೆ ಮನೆಗೆ ಹಿಂದಿರುಗಿದ್ದರು. ಈ ವೇಳೆ ಆರೋಪಿ ಶೇರ್ ಖಾನ್ ತನ್ನ ಸ್ನೇಹಿತರ ಜೊತೆ ಬಂದು ಯುವತಿಗೆ ಚಾಕುವಿನಿಂದ ಅನೇಕ ಬಾರಿ ಇರಿದು ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ತಕ್ಷಣ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ. ನನ್ನ ಮಗಳು ಆರೋಪಿಯನ್ನು ಮದುವೆಯಾಗಲು ನಿರಾಕರಿಸಿದ್ದಳು. ಆದರೂ ಆರೋಪಿ ನನ್ನ ಮಗಳಿಗೆ ಪದೇ ಪದೇ ಮದುವೆಯಾಗುವಂತೆ ಒತ್ತಡ ಹಾಕುತ್ತಿದ್ದನು. ನಾವು ಈಗಾಗಲೇ ಬೇರೆ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದೆವು ಎಂದು ಮೃತ ಯುವತಿಯ ತಂದೆ ನೋವಿನಿಂದ ಹೇಳಿದ್ದಾರೆ.
ಕೊಲೆ ಮಾಡಿದ ನಂತರ ಆರೋಪಿ ಶೇರ್ ಖಾನ್ ಪರಾರಿಯಾಗಿದ್ದನು. ಆದರೆ ಇದೀಗ ಪಂಚಶೀಲ್ ಕಾಲೋನಿಯಲ್ಲಿ ಪೊಲೀಸ್ ತಂಡವು ಆತನನ್ನು ಬಂಧಿಸಿದೆ. ಕೊಲೆ ಮಾಡಲು ಬಳಿಸಿದ್ದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ನಾಲ್ವರು ಸಹಚರರನ್ನು ಸಹ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಲಾನಿಧಿ ನೈಥನಿ ತಿಳಿಸಿದ್ದಾರೆ.