ಮದ್ವೆಯಾದ ಎರಡೇ ದಿನಕ್ಕೆ ಮದುಮಗಳು ತವರಿಗೆ- ಕಾಡಿ ಬೇಡಿ ವಿವಾಹವಾಗಿ ಕೈಕೊಟ್ಟ ಭೂಪ

Public TV
1 Min Read

ಮಂಡ್ಯ: ಲಾಕ್‍ಡೌನ್ ನಡುವೆ ಲಕ್ಷಾಂತರ ಹಣ ಸಾಲ ಮಾಡಿ ವರದಕ್ಷಿಣೆ ನೀಡಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಸೋದರತ್ತೆ ಮಗನೇ ಯುವತಿಗೆ ವಂಚಿಸಿದ್ದು, ಮದುವೆಯಾದ ಎರಡೇ ದಿನಕ್ಕೆ ತವರಿಗೆ ಕಳುಹಿಸಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

ಹರೀಶ್ ಮದುವೆಯಾದ ಎರಡು ದಿನಕ್ಕೆ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದಾನೆ. ಈತ ಮೈಸೂರು ಜಿಲ್ಲೆಯ ಬೆಳವಾಡಿ ಗ್ರಾಮದವನು. ಜೂನ್ 1ರಂದು ಜಿಲ್ಲೆಯ KRS ಸಮೀಪದ ಹೊಂಗಹಳ್ಳಿ ನಿವಾಸಿಗಳಾದ ತಾಯಮ್ಮ-ಈರಪ್ಪ ಮಗಳ ಜೊತೆ ವಿವಾಹವಾಗಿದ್ದನು.

ಹರೀಶ್ ಮದುವೆಯಾದ ಎರಡೇ ದಿನಕ್ಕೆ ಹುಡುಗಿ ಮಾನಸಿಕ ರೋಗದಿಂದ ಬಳಲುತ್ತಿದ್ದಾಳೆ. ನಿಶಕ್ತಿ ಇರುವುದರಿಂದ ಮಗು ಆಗುವುದಿಲ್ಲ. ಇವಳ ಜೊತೆ ನನ್ನಿಂದ ಬಾಳೋಕೆ ಆಗೋದಿಲ್ಲ ಎಂದು ತವರಿಗೆ ಕಳುಹಿಸಿದ್ದಾನೆ ಎನ್ನಲಾಗಿದೆ. ಇದರಿಂದ ಆಘಾತಕ್ಕೆ ಒಳಗಾಗಿರುವ ಯುವತಿ, ನಾನು ಗಂಡನ ಜೊತೆಯಲ್ಲೇ ಬದುಕಬೇಕು. ಇಲ್ಲವಾದರೆ ಆತ್ಮಹತ್ಯೆಯೊಂದೇ ದಾರಿ ಎಂದು ಹೇಳುತ್ತಿದ್ದಾಳೆ.

ಕಾಡಿ ಬೇಡಿ ಮದುವೆಯಾಗಿ ಕೈಕೊಟ್ಟ ಭೂಪ
ಮಗಳಿಗೆ ಸದ್ಯಕ್ಕೆ ಮದುವೆ ಯೋಜನೆ ಇರಲಿಲ್ಲ. ಆದರೆ ಈರಪ್ಪ ಅವರ ಅಕ್ಕನ ಮಗ ಹರೀಶ್ ಮದುವೆ ಮಾಡಿಕೊಡಿ, ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಬೀಡಿಸುತ್ತಿದ್ದನು. ಗೊತ್ತಿಲ್ಲದವರಿಗೆ ಮದುವೆ ಮಾಡಿಕೊಡುವುದಕ್ಕಿಂತ ಸಂಬಂಧಿಕರಿಗೆ ಮದುವೆ ಮಾಡಿಕೊಟ್ಟರೆ ಮಗಳನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ನಂಬಿದ್ದೆ. ಲಾಕ್‍ಡೌನ್ ನಡುವೆಯೂ ಸಾಲ ಮಾಡಿ 6 ಲಕ್ಷ ಹಣ ಹಾಗೂ 80 ಗ್ರಾಂ ಚಿನ್ನ ನೀಡಿ ಮದುವೆ ಮಾಡಿಕೊಟ್ಟಿದ್ದೆವು. ಆದರೆ ಎರಡೇ ದಿನಕ್ಕೆ ಮಗಳನ್ನು ತವರು ಮನೆಗೆ ಕಳುಹಿಸಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸುತ್ತಿದ್ದಾರೆ.

ತಾಯಮ್ಮ ಹಾಗೂ ಈರಪ್ಪ ದಂಪತಿಗೆ ಇಬ್ಬರು ಪುತ್ರಿಯರು. ಮೊದಲ ಮಗಳಿಗೆ 8 ವರ್ಷದ ಹಿಂದೆಯೇ ಮದುವೆಯಾಗಿದೆ. ಸದ್ಯಕ್ಕೆ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಈ ಘಟನೆ ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *