ಹುಬ್ಬಳ್ಳಿ: ಕೊರೊನಾ ಲಾಕ್‍ಡೌನ್ ವೇಳೆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ ಅವರು ಮದ್ಯದಂಗಡಿ ಪ್ರಾರಂಭಕ್ಕೆ ಅನುಮತಿ ಕೋರಿದ್ದಾರೆ.
ಕೊರೊನಾ ವೈರಸ್ ಎಲ್ಲೆಡೆ ಹಬ್ಬುತ್ತಿದೆ. ಈ ಮಧ್ಯೆ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ನಿರ್ಧಾರ ಸರಿಯಲ್ಲ ಎಂದು ಅರವಿಂದ್ ಬೆಲ್ಲದ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಮಾರ್ಚ್ 21ರಂದು ಅವರು ಎಂಎಸ್‍ಐಎಲ್ ಮದ್ಯದಂಗಡಿ ತೆರೆಯಲು ಅನುಮತಿ ಕೋರಿದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಹಿಂದೆ ಅರವಿಂದ್ ಬೆಲ್ಲದ ಅವರು ಸಭೆ ಹಾಗೂ ಸುದ್ದಿಗೋಷ್ಠಿಯಲ್ಲಿ ಮದ್ಯ ಮಾರಾಟದ ವಿರುದ್ಧ ಆಂದೋಲನ ಮಾಡುವ ಮೂಲಕ ಧ್ವನಿ ಎತ್ತುವುದಾಗಿ ಹೇಳಿದ್ದರು. ಆದರೆ ಈಗ ಅವರು ಅನುಮತಿ ಕೋರಿ ಬರೆದಿರುವ ಪತ್ರ ಮದ್ಯ ಮಾರಾಟ ವಿರೋಧಿಸುವವರಲ್ಲಿ ಮತ್ತಷ್ಟು ಆಂತಕ ಸೃಷ್ಟಿಸಿದೆ. ಶಾಸಕರು ಮದ್ಯ ನಿಷೇಧ ಮಾಡಬೇಕು ಎಂದು ಹೇಳಿದ್ದು ಕೇವಲ ಪ್ರಚಾರಕ್ಕೆ ಎಂಬ ಅನುಮಾನ ಶುರುವಾಗಿದೆ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ ಅವರು ರಾಜ್ಯಾದ್ಯಂತ ಮದ್ಯ ನಿಷೇಧ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಆಡಳಿತ ಪಕ್ಷದ ಶಾಸಕರಾಗಿ ಮದ್ಯ ನಿಷೇಧದಕ್ಕೆ ಧ್ವನಿ ಎತ್ತಿರುವದಕ್ಕೆ ಅವರ ಪರವಾಗಿ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿತ್ತು.
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಅರವಿಂದ್ ಬೆಲ್ಲದ ಅವರನ್ನು ಸನ್ಮಾನಿಸಿ ನಿಮ್ಮೊಂದಿಗೆ ನಾವಿದ್ದೇವೆ. ಮದ್ಯ ನಿಷೇಧ ಹೋರಾಟಕ್ಕೆ ಕೈ ಜೋಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದವಿಂದ್ ಬೆಲ್ಲದ ಅವರು ದ್ವಿಮುಖ ನೀತಿ ಈಗ ಬಯಲಾಗಿದೆ. ಮದ್ಯ ನಿಷೇಧದ ಬಗ್ಗೆ ಹೇಳಿಕೆ ನೀಡಿ ಪ್ರಚಾರ ಪಡೆದಿದ್ದ ಅವರು ಮಾರ್ಚ್ 21ರಂದು ಕೆಲಗೇರಿ ಬಳಿ ಎಂಎಸ್‍ಐಎಲ್ ಮಳಿಗೆ ತೆರಯಲು ಅನುಮತಿ ನೀಡಬೇಕು ಎಂದಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.