ಮದ್ಯ ಬಿಡುವಂತೆ ಮಗ ತಾಕೀತು- ಮರವೇರಿ ಕುಳಿತು ತಂದೆ ಆತ್ಮಹತ್ಯೆ ಡ್ರಾಮಾ

Public TV
2 Min Read

– ವ್ಯಕ್ತಿ ಕೆಳಗಿಳಿಸಲು ಪೊಲೀಸರು, ಅಗ್ನಿಶಾಮಗ ಸಿಬ್ಬಂದಿ ಹರಸಾಹಸ
– ಬಾಯಾರಿಕೆಯಾಗುತ್ತಿದ್ದಂತೆ ನೀರು ಕುಡಿಯಲು ಕೆಳಗಿಳಿದ

ಬೆಂಗಳೂರು: ಮದ್ಯ ಸೇವನೆ ಬಿಡುವಂತೆ ಮಗ ಹೇಳಿದ್ದಕ್ಕೆ ತಂದೆ 50 ಅಡಿ ಎತ್ತರದ ಸಿಲ್ವರ್ ಮರವನ್ನು ಏರಿ ಕುಳಿತು ಹೈ ಡ್ರಾಮಾ ಮಾಡಿದ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ಮಂಗಳವಾರ ಬೆಳಗ್ಗೆ ಘಟನೆ ನಡೆದಿದ್ದು, ಮರವೇರಿ ಕುಳಿತ ವ್ಯಕ್ತಿಯನ್ನು 50 ವರ್ಷದ ಜಾಯ್ ಮ್ಯಾಗ್ಥೋ ಎಂದು ಗುರುತಿಸಲಾಗಿದೆ. ನನ್ನ ಮಗ ಮದ್ಯ ಕುಡಿಯುವುದನ್ನು ಬಿಡು ಎಂದು ತಾಕೀತು ಮಾಡುತ್ತಿದ್ದಾನೆ. ಹೀಗಾಗಿ ಈ ಮರದಿಂದಲೇ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿ 50 ಅಡಿ ಎತ್ತರದ ಮರ ಏರಿ ಕುಳಿತು ಹೈ ಡ್ರಾಮಾ ಮಾಡಿದ್ದಾರೆ.

ವೃತ್ತಿಯಲ್ಲಿ ತರಕಾರಿ ಮಾರುವ ಧರ್ಮ ಅವರ ತಂದೆ ಈ ರೀತಿ ವರ್ತಿಸಿದ್ದಾರೆ. ಮದ್ಯ ಸೇವನೆ ಮಾಡಿ ಬೇಕಾಬಿಟ್ಟಿಯಾಗಿ ವರ್ತಿಸುವುದರಿಂದ ಬೇಸತ್ತ ಮಗ, ಮದ್ಯ ಸೇವನೆ ಬಿಡುವಂತೆ ತಂದೆಗೆ ತಾಕೀತು ಮಾಡಿದ್ದಾರೆ. ಅಲ್ಲದೆ ಇದೇ ರೀತಿ ಮುಂದುವರಿಸಿದರೆ ಪುನರ್‍ವಸತಿ ಕೇಂದ್ರಕ್ಕೆ ಬಿಟ್ಟು ಬರುವುದಾಗಿ ಬೆದರಿಸಿದ್ದಾರೆ.

ಇದು ತಿಳಿಯುತ್ತಿದ್ದಂತೆ 50 ವರ್ಷದ ವ್ಯಕ್ತಿ ಬೆಳಗ್ಗೆ ಸುಮಾರು 10ಗಂಟೆ ವೇಳೆಗೆ ಹಲಗೆವಾದೇರಹಳ್ಳಿಯಲ್ಲಿ 50 ಅಡಿ ಎತ್ತರದ ಸಿಲ್ವರ್ ಮರ ಏರಿ ಕುಳಿತಿದ್ದಾರೆ. ಸ್ಥಳೀಯರು ಇದನ್ನು ಗಮನಿಸಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೆಳಗೆ ಇಳಿಯುವಂತೆ ಜಾಯ್ ಅವರಿಗೆ ಮನವಿ ಮಾಡಿದ್ದಾರೆ. ಆದರೆ ವ್ಯಕ್ತಿ ಕೆಳಗೆ ಬಂದಿಲ್ಲ.

ಸುರಕ್ಷಿತವಾಗಿ ಕೆಳಗಿಳಿಸಬೇಕೆಂದು ಪೊಲೀಸರು ಅಗ್ನಿಶಾಮಕ ಸಿಬ್ಬಂದಿ, ತುರ್ತು ಸೇವೆಗಳ ತಂಡ ಹಾಗೂ ಅಂಬುಲೆನ್ಸ್‍ನ್ನೂ ಸ್ಥಳಕ್ಕೆ ಕರೆಸಿದ್ದಾರೆ. 10.30ರ ಹೊತ್ತಿಗೆ ರಕ್ಷಣಾ ತಂಡ ಸ್ಥಳಕ್ಕಾಗಮಿಸಿದ್ದು, ಬಳಿಕ ವ್ಯಕ್ತಿಯನ್ನು ಕೆಳಗಿಳಿಸಲಾಗಿದೆ.

ಮರದಿಂದ ಕೆಳಗೆ ಬಿದ್ದು ಪ್ರಾಣ ಬಿಡುತ್ತೇನೆ ಎಂದು ವ್ಯಕ್ತಿ ಬೆದರಿಕೆ ಹಾಕಿದ್ದು, ಬಳಿಕ ಇವರ ಮಗ ಧರ್ಮ ಸಹ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಜಾಯ್ ಮಧ್ಯಾಹ್ನ 12.15ರ ವರೆಗೂ ಮರದ ಮೇಲೆಯೇ ಕುಳಿತಿದ್ದು, ಬಾಯಾರಿಕೆಯಾಗಿದ್ದಕ್ಕೆ ನೀರು ಕುಡಿಯಲು ಮರದಿಂದ ಇಳಿದಿದ್ದಾರೆ. ಕೆಳಗೆ ಬರುತ್ತಿದ್ದಂತೆ ಆತನನ್ನು ಹಿಡಿದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ರಾಜರಾಜೇಶ್ವರಿ ನಗರದ ಪೊಲೀಸರು ಮಾಹಿತಿ ನೀಡಿದ್ದು, ಜಾಯ್ ಈ ಹಿಂದೆ ತಮ್ಮ ಗ್ರಾಮದಲ್ಲಿ 6 ಬಾರಿ ಮರ ಹತ್ತಿದ್ದಾರೆ. ಆದರೆ ಇದೀಗ ಮರ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿದ್ದರು. ಜಾಯ್ ಆತ್ಮಹತ್ಯೆ ಪ್ರವೃತ್ತಿ ಹೊಂದಿದ್ದು, ಅವರಿಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಿ ಎಂದು ಮಗ ಧರ್ಮ ಅವರಿಗೆ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *