ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ ಅಸ್ತಂಗತ

Public TV
1 Min Read

ಉಡುಪಿ: ಮದ್ದಳೆ ಮಾಂತ್ರಿಕ ಹಿರಿಯಡ್ಕ ಗೋಪಾಲ್ ರಾವ್ ಇಂದು ಒಂತಿಬೆಟ್ಟುವಿನಲ್ಲಿ ನಿಧನರಾಗಿದ್ದಾರೆ.

ಹಿರಿಯಡ್ಕ ಮೂಲದವರು ಗೋಪಾಲ್ ರಾವ್ ಅವರು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರುವಾಗಿದ್ದರು. ಏರು ಮದ್ದಳೆಯ ಅನ್ವೇಷಕ ಎಂಬ ಖ್ಯಾತಿಯ ಕಲಾವಿದ ಎಂದು ಚಿರಪರಿಚಿತರಾಗಿದ್ದರು. ದೇಶ, ವಿದೇಶಗಳಲ್ಲೂ ಗೋಪಾಲ್ ರಾವ್ ಅವರು ಯಕ್ಷಗಾನ ಪ್ರದರ್ಶನ ನೀಡಿದ್ದರು.

1919 ಡಿಸೆಂಬರ್ 15ರಂದು ಹಿರಿಯಡ್ಕದಲ್ಲಿ ಗೋಪಾಲ್ ರಾವ್ ಅವರು ಜನಿಸಿದ್ದರು. ಮೇಳದಲ್ಲಿ ಮದ್ದಳೆ ವಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಗೋಪಾಲ್ ರಾವ್ ಅವರು ಯಕ್ಷಗಾನದ ಬಡಗುತಿಟ್ಟಿನಲ್ಲಿ ಏರು ಮದ್ದಳೆ ಬಾರಿಸುವದರಲ್ಲಿ ಖ್ಯಾತನಾಮರಾಗಿದ್ದರು. ಹಿರಿಯಡ್ಕ್ ಗೋಪಾಲರಾವ್ ಕುರಿತು ಡಾ.ಕೆ.ಎಂ.ರಾಘವ್ ನಂಬಿಯಾರ್ ಅವರು ‘ರಂಗ ವಿದ್ಯೆಯ ಹೊಲಬು’ ಎಂಬ ಪುಸ್ತಕ ಬರೆದಿದ್ದಾರೆ.

ಕನ್ನಡ ರಾಜ್ಯೋತ್ಸವ, ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸೇರಿದಂತೆ ಹಲವು ಪ್ರಶಸ್ತಿ ಇವರನ್ನ ಅರಸಿ ಬಂದಿದ್ದವು. ಹಿರಿಯಡ್ಕ ಗೋಪಾಲ್ ರಾವ್ ಅವರಿಗೆ 101 ವರ್ಷ ವಯಸ್ಸಾಗಿತ್ತು. ಗೋಪಾಲರಾವ್ ಅವರ ಅಂತ್ಯಕ್ರಿಯೆ ಭಾನುವಾರ ಹಿರಿಯಡ್ಕದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *