ಬೆಂಗಳೂರು: ಪ್ರೀತಿಸಿದ ಹುಡುಗ ಮದುವೆಯಾಗುವುದಾಗಿ ಹೇಳಿ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ.
ಬಿ.ತನುಜ ಮೃತ ಯುವತಿ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದ ತನುಜ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸೋಮವಾರ ಸಂಜೆ ಸುಮಾರು 6 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನುಜ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಳೆದ ಕೆಲ ವರ್ಷಗಳಿಂದ ಆನೇಕಲ್ ಪಟ್ಟಣದ ಹೊಸೂರು ರಸ್ತೆಯ ನಿವಾಸಿ ಮಂಜುನಾಥ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಯುವತಿಗೆ ಪ್ರಿಯಕರ ಮದುವೆಯಾಗುವುದಾಗಿ ಹೇಳಿ ನಂಬಿಸಿದ್ದ. ಆದರೆ ಇದೀಗ ಮಂಜುನಾಥ್ ಮದುವೆಯಾಗುವುದಕ್ಕೆ ನಿರಾಕರಣೆ ಮಾಡಿದ್ದಾನೆ. ಇದರಿಂದ ಮನನೊಂದು ತನುಜ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ತನುಜ ತಂದೆ-ತಾಯಿ ಕೈಮಗ್ಗ ನೇಕಾರರಾಗಿದ್ದು, ಕಷ್ಟದ ಜೀವನ ನಡೆಸುತ್ತಿದ್ದರು. ಇದೀಗ ಬೆಳೆದ ಮಗಳನ್ನು ಕಳೆದುಕೊಂಡು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆನೇಕಲ್ ಪೋಲೀಸರು ಪರಿಶೀಲನೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ತನುಜ ತಂದೆ ಈ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.