ಮತ್ತೊಮ್ಮೆ ಪುಲ್ವಾಮಾದಂತೆ ದಾಳಿಗೆ ಯತ್ನ – ಉಗ್ರರ ಕಾರು ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿತು ಬೆಂಕಿ

Public TV
2 Min Read

– ಉಗ್ರರ ಸಂಚು ವಿಫಲಗೊಳಿಸಿದ ಭದ್ರತಾ ಪಡೆ
– ಸ್ಫೋಟದ ತೀವ್ರತೆಗೆ ಮುದ್ದೆಯಾಯ್ತು ಕಾರು
– ಗುಪ್ತಚರ ಇಲಾಖೆ ನೀಡಿತ್ತು ಖಚಿತ ಮಾಹಿತಿ

ಶ್ರೀನಗರ: ಕಳೆದ ವರ್ಷ ಪುಲ್ವಾಮಾದಲ್ಲಿ ಕಾರು ಬಾಂಬ್ ದಾಳಿ ನಡೆಸಿದಂತೆ ಈ ವರ್ಷವೂ ಭಾರೀ ಪ್ರಮಾಣದಲ್ಲಿ ಕೃತ್ಯ ಎಸಗಲು ಮುಂದಾಗಿದ್ದ ಉಗ್ರರ ಸಂಚನ್ನು ಭದ್ರತಾ ದಳ ವಿಫಲಗೊಳಿಸಿದೆ.

ಬುಧವಾರ ರಾತ್ರಿ ಪುಲ್ವಾಮಾದ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಬಿಳಿ ಬಣ್ಣದ ಸ್ಯಾಂಟ್ರೋ ಕಾರೊಂದು ಬಂದಿದೆ. ಈ ಕಾರು ನಿಲ್ಲಿಸಿದೇ ಬ್ಯಾರಿಕೇಡ್ ಅನ್ನು ತಳ್ಳಿಕೊಂಡು ಮುಂದೆ ಸಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಕಾರನ್ನು ಹಿಂಬಾಲಿಸಿದ್ದಾರೆ. ಆದರೆ ಡ್ರೈವರ್ ಸ್ವಲ್ಪ ದೂರದವರೆಗೆ ಚಲಾಯಿಸಿ ಕಾರನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಜಮ್ಮು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಪ್ರತಿಕ್ರಿಯಿಸಿ, ಗುಪ್ತಚರ ಇಲಾಖೆ ಪುಲ್ವಾಮಾ ರೀತಿಯಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿತ್ತು. ಬುಧವಾರ ಬೆಳಗ್ಗೆಯಿಂದ ಕಾರನ್ನು ನಾವು ಹುಡುಕಾಡುತ್ತಿದ್ದೆವು ಎಂದು ತಿಳಿಸಿದ್ದಾರೆ.

ನಕಲಿ ನೋಂದಣಿ ಸಂಖ್ಯೆಯಲ್ಲಿದ್ದ ಕಾರಿನಲ್ಲಿ 20 ಕೆಜಿ ಸುಧಾರಿತ ಸ್ಫೋಟಕ ಸಾಮಾಗ್ರಿಗಳನ್ನು(ಐಇಡಿ) ತುಂಬಲಾಗಿತ್ತು. ಕಾರಿನಲ್ಲಿರುವ ಸ್ಫೋಟಕವನ್ನು ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ಆಗಮಿಸಿ ನಿಷ್ಕ್ರಿಯಗೊಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಕಾರು ಮುದ್ದೆಯಾಗಿ ಹೋಗಿದೆ.

ಕಳೆದ ರಾತ್ರಿಯಿಂದ ಈ ಕಾರಿನ ಮೇಲೆ ನಿಗಾ ಇಡಲಾಗಿತ್ತು. ಇಂದು ಸ್ಫೋಟಗೊಳ್ಳುವ ಮೊದಲು ಹತ್ತಿರದಲ್ಲಿದ್ದ ನಿವಾಸಿಗಳನ್ನು ತೆರವುಗೊಳಿಸಲಾಗಿತ್ತು. ಭಾರತೀಯ ಸೇನೆ, ಪೊಲೀಸ್, ಪ್ಯಾರಾಮಿಲಿಟರಿ ಪಡೆಯಿಂದ ಜಂಟಿಯಾಗಿ ಈ ಕಾರ್ಯಾಚರಣೆ ನಡೆದಿದೆ.

ಕಳೆದ 2 ತಿಂಗಳಿನಲ್ಲಿ 38 ಮಂದಿ ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ. ಅದರಲ್ಲೂ ಮುಖ್ಯವಾಗಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಯಾಜ್ ನಾಯ್ಕೂನನ್ನು ಅವನ ಮನೆಗೆ ಹೋಗಿ ಎನ್‍ಕೌಂಟರ್ ಮಾಡಿತ್ತು.

ಭದ್ರತಾ ಪಡೆಗಳು ನಮ್ಮ ಸದಸ್ಯರನ್ನು ನಿರ್ನಾಮ ಮಾಡುತ್ತಿರುವ ಹಿನ್ನೆಲೆಯಲ್ಲಿ ಉಗ್ರರು ಮುಂದಿನ ದಿನಗಳಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ಇಲಾಖೆ ಸೂಚಿಸಿತ್ತು.

ಕಳೆದ ವರ್ಷದ ಫೆ. 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರಿದ್ದ ಬಸ್ಸಿಗೆ ಜೈಷ್ ಉಗ್ರ ಅದಿಲ್ ಅಹ್ಮದ್ ದಾರ್ ಇಕೋ ಕಾರನ್ನು ಗುದ್ದಿಸಿದ್ದ. ಪರಿಣಾಮ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಸ್ಫೋಟದ ತೀವ್ರತೆಗೆ ಯೋಧರ ದೇಹದ ಭಾಗಗಳು  ಛಿದ್ರ ಛಿದ್ರವಾಗಿ ದೂರದವರೆಗೆ ಚಿಮ್ಮಿತ್ತು. ಈ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಸೇನೆ ಮೊದಲ ಬಾರಿಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿತ್ತು.

Share This Article
Leave a Comment

Leave a Reply

Your email address will not be published. Required fields are marked *